‘ಶೀರೂರು ಪರ್ಯಾಯ ನಮ್ಮ ಪರ್ಯಾಯ’: ಶ್ರೀ ವೇದವರ್ಧನ ತೀರ್ಥ ಶ್ರೀಪಾದರು
ನಗರದ ಕದ್ರಿ ಮಲ್ಲಿಕಾ ಬಡಾವಣೆಯ ಮಂಜುಪ್ರಸಾದದಲ್ಲಿ ಕಲ್ಕೂರ ಪ್ರತಿಷ್ಠಾನ ವತಿಯಿಂದ ಸೋಮವಾರ ತುಲಾಭಾರ ಸೇವೆ ಸ್ವೀಕರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ನಮ್ಮ ಪರ್ಯಾಯದ ಅವಽಯಲ್ಲಿ ಕೃಷ್ಣ ಭಕ್ತರು ಶ್ರೀಕೃಷ್ಣ ಮಠದಲ್ಲಿ ಯಾವುದೇ ರೀತಿಯಲ್ಲಿ ಸೇವೆಯಲ್ಲಿ ಭಾಗವಹಿಸಬಹುದು. ಸ್ವಚ್ಛತೆಯ ಕಾರ್ಯ, ಬಡಿಸುವುದು, ಗುಡಿಸುವುದು, ಹೂ ಕಟ್ಟುವುದು ಸೇರಿದಂತೆ ಮಠದಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಬಹುದು. ಧರ್ಮ ಜಾಗೃತಿಯ ಜತೆಗೆ ಜನರು ಮಠದಲ್ಲಿ ಇದ್ದುಕೊಂಡು ದೇವರ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂಬುದು ಇದರ ಉದ್ದೇಶ. ಇದಕ್ಕಾಗಿ ಶೀರೂರು ಮಠದ ವೆಬ್‌ಸೈಟ್‌ನಲ್ಲಿ ಭಕ್ತರು ನೋಂದಣಿ ಮಾಡಿಕೊಂಡು 10 ದಿನ, ಒಂದು ವಾರ ಹೀಗೆ ಸೇವೆಯಲ್ಲಿ ಭಾಗವಹಿಸಬಹುದು ಎಂದರು.
ವೇದಗಳನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ನಮ್ಮ ಪರ್ಯಾಯದ ಅವಽಯಲ್ಲಿ ವೇದ ಪಂಡಿತರಿಂದ ನಿರಂತರ ವೇದ ಪಾರಾಯಣ ಹಮ್ಮಿಕೊಳ್ಳಲಾಗಿದೆ. ನಾಲ್ಕು ವೇದಗಳನ್ನು ದಿನಕ್ಕೆ ತಲಾ 20 ಮಂದಿ ಬೆಳಗ್ಗಿನಿಂದ ರಾತ್ರಿವರೆಗೆ ಪಾರಾಯಣ ಮಾಡಲಿದ್ದಾರೆ. ವೇದ ಕಲಿಯುವವರಿಗೆ ಈ ಮೂಲಕ ಪ್ರೋತ್ಸಾಹ ನೀಡಲಾಗುವುದು ಎಂದು ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ತಿಳಿಸಿದರು.
ನಮ್ಮ ಪರ್ಯಾಯದ ಅವಽಯಲ್ಲಿ ಶ್ರೀಕೃಷ್ಣ ದೇವರ ಪೂಜೆಯ ಜತೆಗೆ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನದಾನಕ್ಕೆ ಆದ್ಯತೆ ನೀಡಲಾಗುವುದು. ಈ ಎಲ್ಲ ಕಾರ್ಯಗಳಿಗೆ ಕೃಷ್ಣ ಭಕ್ತರು ಕೈಜೋಡಿಸಬೇಕು. ಈ ಹಿನ್ನೆಲೆಯಲ್ಲಿ ಸೇವೆಗಳಲ್ಲಿ ಭಾಗವಹಿಸಲು ಭಕ್ತರಿಗೆ ವಿಶೇಷ ಅವಕಾಶ ನೀಡಲಾಗಿದೆ. ಧರ್ಮ ಜಾಗೃತಿ ಜತೆಗೆ ನಮ್ಮ ಸಂಸ್ಕೃತಿ ರಕ್ಷಣೆ ಆಗಬೇಕು ಎಂಬುದು ನಮ್ಮ ಆಶಯವಾಗಿದೆ. ಮಠದ ಭದ್ರತೆ, ಸ್ವಚ್ಛತೆಗೂ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು ಎಂದರು.
ಶೀರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ ಮಾತನಾಡಿ, ಶೀರೂರು ಪರ್ಯಾಯಕ್ಕೆ ಎಲ್ಲ ಕಡೆಯಿಂದ ಹೊರೆಕಾಣಿಕೆ ಬರಲಿದೆ. ಯಾರನ್ನೂ ಹೊರೆಕಾಣಿಕೆ ತರಬೇಡಿ ಎಂದು ನಾವಾಗಲಿ, ಪರ್ಯಾಯ ಸ್ವಾಗತ ಸಮಿತಿಯಾಗಲಿ ತಿಳಿಸಿಲ್ಲ. ಈ ವಿಚಾರದಲ್ಲಿ ಸಂವಹನ ಕೊರತೆ ಉಂಟಾಗಿತ್ತು. ಕೃಷ್ಣ ಭಕ್ತರಾಗಿ ಯಾರೂ ಕೂಡಾ ಹೊರೆಕಾಣಿಕೆ ಸಲ್ಲಿಸಬಹುದು. ಹೊರೆಕಾಣಿಕೆ ಮೆರವಣಿಗೆಯ ಸಂದರ್ಭ ಸುಗಮ ಸಂಚಾರದ ದೃಷ್ಟಿಯಿಂದ ಪೊಲೀಸ್ ಇಲಾಖೆಗೆ ಮುಂಚಿತವಾಗಿ ತಿಳಿಸಬೇಕಿದೆ. ಜತೆಗೆ ಉಪಾಹಾರದ ವ್ಯವಸ್ಥೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಹೊರೆಕಾಣಿಕೆ ತರುವವರು ಪರ್ಯಾಯ ಸಮಿತಿಗೆ ಮುಂಚಿತವಾಗಿ ತಿಳಿಸಿ ಹೊರೆಕಾಣಿಕೆ ತರುವಂತೆ ವಿನಂತಿಸಲಾಗಿದೆ ಎಂದರು.