ಸಂಚಾರ ನಿಯಮಗಳ ಪಾಲನೆಯಿಂದ ಜೀವ ರಕ್ಷಣೆ: ಜೈಬುನ್ನೀಸಾ

ಸಂಚಾರ ನಿಯಮಗಳ ಪಾಲನೆಯಿಂದ ಜೀವ ರಕ್ಷಣೆ: ಜೈಬುನ್ನೀಸಾ


ಮಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸದೆ ಕಟ್ಟುನಿಟ್ಟಾಗಿ ಪಾಲಿಸಿದರೆ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದು. ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ರಸ್ತೆ ಅಪಘಾತಗಳನ್ನು ತಡೆಯಲು  ಸಹಕರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ಹೇಳಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ಸೋಮವಾರ ಮಂಗಳೂರು ಪ್ರಾದೇಶಿಕ ಸಾರಿಗೆ ಕಛೇರಿ ಸಭಾಂಗಣದಲ್ಲಿ ನಡೆದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅಪಘಾತದಿಂದ ಅನೇಕ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ನಿಯಮಗಳನ್ನು ಪಾಲಿಸುವುದೊಂದೇ  ಜೀವ ರಕ್ಷಣೆಗಿರುವ ಸಾಧನ. ನಮ್ಮನ್ನೇ ನಂಬಿಕೊಂಡಿರುವ ಕುಟುಂಬದ ಕ್ಷೇಮವನ್ನು ವಾಹನ ಸವಾರರು ಸದಾ ನೆನಪಿನಲ್ಲಿಡಬೇಕು ಎಂದು ಅವರು ಹೇಳಿದರು.    

ರಸ್ತೆ ಸುರಕ್ಷತೆಯ ಬಗ್ಗೆ ಜನರಿಗೆ ಸಮಗ್ರ ಮಾಹಿತಿ ನೀಡಬೇಕು. ಯುವಕರಲ್ಲಿ ಕಾನೂನಿನ ಅರಿವಿನ ಕೊರತೆಯಿದ್ದು, ಶಾಲಾ -ಕಾಲೇಜು ಮಕ್ಕಳಿಗೆ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಬೇಕು. ವಾಹನ ಸವಾರರು ಅತಿಯಾದ ವೇಗದಲ್ಲಿ ಮತ್ತು ಮದ್ಯ ಸೇವಿಸಿ, ಅಜಾಗರೂಕತೆಯಿಂದ ವಾಹನ ಚಲಾಯಿಸುವುದು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಅವರು ಹೇಳಿದರು.    

ಉಪಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ ಬಸವರಾಜ ಶಿರೋಳಕರ ಅಧ್ಯಕ್ಷತೆ ವಹಿಸಿದ್ದರು.

ಸಂಚಾರ ಪೋಲಿಸ್ ಉಪವಿಭಾಗದ ಸಹಾಯಕ ಆಯುಕ್ತೆ  ನಜ್ಮಾ ಫಾರೂಖಿ ಮತ್ತಿತರರು ಉಪಸ್ಥಿತರಿದ್ದರು. ಕಛೇರಿ ಅಧೀಕ್ಷಕಿ ರಶ್ಮಿ ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article