ಕ್ರೀಡಾ ಪತ್ರಿಕೋದ್ಯಮದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯೇ ವರದಿಯ ಮೂಲ ತತ್ವವಾಗಬೇಕು: ಸ್ಟಾನ್ ರಾಯನ್

ಕ್ರೀಡಾ ಪತ್ರಿಕೋದ್ಯಮದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯೇ ವರದಿಯ ಮೂಲ ತತ್ವವಾಗಬೇಕು: ಸ್ಟಾನ್ ರಾಯನ್


ಮೂಡುಬಿದಿರೆ: ವಿಶ್ವದ ಅನೇಕ ದೇಶಗಳಿಗೆ ಪ್ರವಾಸ ಮಾಡಿ ಒಲಿಂಪಿಕ್ಸ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ವರದಿ ಮಾಡಿದ ಅನುಭವವನ್ನು ಹಂಚಿಕೊಂಡ ಅವರು, ಕ್ರೀಡಾ ಪತ್ರಿಕೋದ್ಯಮದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯೇ ವರದಿಯ ಮೂಲ ತತ್ವವಾಗಬೇಕು ಎಂದು ನಿವೃತ್ತ ಹಿರಿಯ ಕ್ರೀಡಾ ಸಂಪಾದಕ ಸ್ಟಾನ್ ರಾಯನ್ ಹೇಳಿದರು. 

ಅವರು ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಪ್ರಚಾರದ ನೆಲೆಯಲ್ಲಿ ಸಹಕರಿಸುತ್ತಿರುವ ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ  ವಿಶೇಷ ಉಪನ್ಯಾಸ ನೀಡಿದರು.


ಕ್ರೀಡಾ ವರದಿಗಾರರು ಸ್ಥಳೀಯ ಕ್ರೀಡಾ ಪಂದ್ಯಗಳಿಗೆ ಹಾಜರಾಗುವ ಮೂಲಕ ಕ್ರೀಡೆಯ ನೈಜ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು. ಸಮಯದ ಪರಿಧಿಯೊಳಗೆ ಕೆಲಸ ನಿರ್ವಹಿಸುವ ಕಲೆಯನ್ನು ಮೊದಲು ಅರಿಯಬೇಕು.  ಸರಳ ಹಾಗೂ ಸ್ಪಷ್ಟ ಬರವಣಿಗೆಗೆ ಆದ್ಯತೆ ನೀಡಬೇಕು. ಕ್ರೀಡಾ ವರದಿಗಳು ಜನರಿಗಾಗಿಯೇ ಹೊರತು ಯಾರನ್ನೂ ಮೆಚ್ಚಿಸಲು ಅಲ್ಲ ಎಂದು ತಿಳಿಸಿದರು.

ಭಾರತದಲ್ಲಿ ಡೋಪಿಂಗ್ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಪರಿಶುದ್ಧ ಕ್ರೀಡೆಯ ಪರವಾಗಿ ಪತ್ರಕರ್ತರು ಧ್ವನಿ ಎತ್ತಬೇಕು ಎಂದರು. 

ಡೋಪಿಂಗ್ ಪ್ರಕರಣ ಕುರಿತು ವಿದ್ಯಾರ್ಥಿನಿ ಸಾಕ್ಷಿ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯವಾಗಿ ಅಥ್ಲೆಟಿಕ್ಸ್ ದೀರ್ಘಾವಧಿಯ ಶ್ರಮ, ನಿರಂತರ ಅಭ್ಯಾಸ, ದೈಹಿಕ-ಮಾನಸಿಕ ಶಿಸ್ತು ಮತ್ತು ಸಹನಶೀಲತೆಯಿಂದ ಮಾತ್ರ ಫಲ ನೀಡುವ ಕ್ರೀಡೆ. ಒಬ್ಬ ಕ್ರೀಡಾಪಟು ವರ್ಷಗಳ ಕಾಲ ತರಬೇತಿ ಪಡೆದು, ಅನೇಕ ಸೋಲು-ಸವಾಲುಗಳನ್ನು ಎದುರಿಸಿ, ದೇಹವನ್ನು ಹಂತ ಹಂತವಾಗಿ ಬೆಳೆಸಿಕೊಂಡು ಉನ್ನತ ಮಟ್ಟ ತಲುಪುತ್ತಾನೆ. ಪ್ರದರ್ಶನದ ಸುಧಾರಣೆಯೂ ಸಹ ಕ್ರಮೇಣವಾಗಿರುತ್ತದೆ. ಸೆಕೆಂಡುಗಳ ಅಂತರದಲ್ಲಿ ವೇಗ ಹೆಚ್ಚುವುದು, ದೂರ ಎಸೆಯುವಲ್ಲಿ ಅಚ್ಚರಿಯಷ್ಟು ಬದಲಾವಣೆ ಕಾಣುವುದು ಅಥವಾ ಸ್ವಲ್ಪ ಅವಧಿಯಲ್ಲಿ ಅಸಾಧಾರಣ ಸಾಧನೆ ಮಾಡುವುದು ಸಹಜವಲ್ಲ. ಅಥ್ಲೆಟಿಕ್ಸ್ನಲ್ಲಿ ನಿಧಾನ, ಆದರೆ ನೈಸರ್ಗಿಕ ಪ್ರಗತಿಯೇ ವಿಶ್ವಾಸಾರ್ಹ. ಅತೀ ವೇಗದ ಸಾಧನೆಗಳು ಸಂಶಯಕ್ಕೆ ಕಾರಣವಾಗಬಲ್ಲದು ಎಂದು ತಿಳಿಸಿದರು.  

ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ್ನು ಅತ್ಯಂತ ಶಿಸ್ತುಬದ್ಧ ಹಾಗೂ ಮಾದರಿಯ ರೀತಿಯಲ್ಲಿ ಆಯೋಜಿಸಿರುವುದಕ್ಕೆ ಮುಗ್ಧ ಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ಅತಿಥಿಗಳಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಒದಗಿಸಿರುವುದು ಅಪರೂಪದ ವ್ಯವಸ್ಥೆಯಾಗಿದೆ ಎಂದು ಪ್ರಶಂಸಿಸಿ, ಇಂತಹ ಆತಿಥ್ಯವೇ ರಾಷ್ಟ್ರಮಟ್ಟದ ಕ್ರೀಡಾಕೂಟಗಳ ಯಶಸ್ಸಿಗೆ ಕಾರಣವಾಗುತ್ತದೆ ಎಂದರು.  ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.  ವಿಭಾಗದ 25 ವಿದ್ಯಾರ್ಥಿಗಳು ಭಾಗವಹಿಸಿದ್ದರು.  

 ಆಳ್ವಾಸ್ ಪತ್ರಿಕೋದ್ಯಮ  ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ, ಅನಿಮೇಶನ್ ವಿಭಾಗದ ಮುಖ್ಯಸ್ಥ ರವಿ ಮೂಡುಕೊಣಾಜೆ, ಉಪನ್ಯಾಸಕರಾದ ಅಕ್ಷಯ, ಹನ, ವಿನೀತ, ಆಕಾಶ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article