ಅ.ಭಾ.ಅಂ. ವಿವಿ ಕ್ರೀಡಾಕೂಟಕ್ಕೆ ಸಾಂಸ್ಕೃತಿಕ ತಂಡಗಳ ಮೆರಗು
Monday, January 12, 2026
ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆರಂಭಗೊಂಡಿರುವ 85ನೇ ಅಖಿಲ ಭಾರತ ಅಂತರ್ ವಿ.ವಿ. ಅಥ್ಲೆಟಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಮೊದಲು ನಡೆದ ಸಾಂಸ್ಕೃತಿಕ ಮೆರವಣಿಗೆಯೂ ಕ್ರೀಡಾಕೂಟದ ಚಾಲನೆಗೆ ಹೊಸ ಮೆರಗನ್ನು ನೀಡಿತು.
ದೇಶದ ವಿವಿಧ ವಿಶ್ವವಿದ್ಯಾಲಯ ತಂಡಗಳ ಪಥ ಸಂಚಲನದ ಹಿಂದೆ ಸಾಗಿದ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸ್ತಬ್ಧಚಿತ್ರಗಳ ಮೂಲಕ ಗಮನ ಸೆಳೆದವು. ಸುಮಾರು 45ಕ್ಕೂ ಹೆಚ್ಚು ವಿವಿಧ ತಂಡಗಳು ಭಾಗವಹಿಸಿತು. ಪ್ರಮುಖ ಆಕರ್ಷಣೆಗಳಾಗಿ ಹರೀಶ್ ಮೂಡುಬಿದಿರೆ ಮಾಲಕತ್ವದ ಕೊಂಬು ಮತ್ತು ಚೆಂಡೆ ತಂಡಗಳು, ಚಂದ್ರಹಾಸ ಕಟೀಲು ಅವರ ತಟ್ಟಿರಾಯ, ದೇವ ರಾಜು ಮಂಡ್ಯ ಅವರ ಮರಗಾಲು ಮತ್ತು ಮಂಜು ಮೈಸೂರು ಅವರ ನಗಾರಿ ತಂಡಗಳು ಭಾಗವಹಿಸಲಿವೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ವಿವಿಧ ಸಾಂಸ್ಕೃತಿಕ ತಂಡಗಳಾದ ಪೂರ್ಣಕುಂಭ, ಲಂಗ ದಾವಣಿ, ಯಕ್ಷಗಾನ ವೇಷ, ದಫ್, ಏಂಜೆಲ್ಸ್ ತಂಡಗಳಲ್ಲಿ ಭಾಗವಹಿಸಿದವು. ಪೌರಾಣಿಕ ಪಾತ್ರಗಳಾದ ಗಣಪತಿ, ಘಟೋತ್ಕಜ, ಆಂಜನೇಯ, ರಾಮ, ವರಾಹ, ವೆಂಕಟರಮಣ ಮತ್ತು ನರಸಿಂಹ ವೇಷಧಾರಿಗಳು ಮೆರವಣಿಗೆಯ ಹಾದಿಯುದ್ದಕ್ಕೂ ಕಳೆ ನೀಡಲಿದ್ದಾರೆ. ಜೊತೆಗೆ ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ತಂಡಗಳು ಶಿಸ್ತುಬದ್ಧವಾಗಿ ಪಥಸಂಚಲನ ನಡೆದವು.
ಆಧುನಿಕ ಆಕರ್ಷಣೆಗಳಾದ ಪೋಲಾರ್ ಬೇರ್, ಹಲ್ಕ್ ಮತ್ತು ಸಂತಾಕ್ಲಾಸ್ ಸ್ತಬ್ಧಚಿತ್ರಗಳು ಮಕ್ಕಳ ಮನಸೆಳೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರ ಮಾರ್ಗದರ್ಶನದಲ್ಲಿ ಪನ್ನಗ ಶರ್ಮನ್, ದಿವ್ಯಾ ಭಂಡಾರಿ ಅವರ ಉಸ್ತುವಾರಿಯಲ್ಲಿ ಬೃಹತ್ ಮೆರವಣಿಗೆ ನಡೆಯಿತು.

