ಆದಿ ಲೋಕೋತ್ಸವ ಪುರಸ್ಕಾರಕ್ಕೆ ಕರ್ನಾಟಕದ ಪ್ರಮುಖರಾದ  ಜನಾರ್ದನ ಗೌಡ ಮುಚ್ಚೂರು ಹಾಗೂ ನೋಟರಿ ವಕೀಲ ವಿಜಯ ಗೌಡ ಶಿಬ್ರಿಕೆರೆ ಆಯ್ಕೆ

ಆದಿ ಲೋಕೋತ್ಸವ ಪುರಸ್ಕಾರಕ್ಕೆ ಕರ್ನಾಟಕದ ಪ್ರಮುಖರಾದ ಜನಾರ್ದನ ಗೌಡ ಮುಚ್ಚೂರು ಹಾಗೂ ನೋಟರಿ ವಕೀಲ ವಿಜಯ ಗೌಡ ಶಿಬ್ರಿಕೆರೆ ಆಯ್ಕೆ


ಮೂಡುಬಿದಿರೆ: ಕುಡುಬಿ ಸಮಾಜದ ಸಂಘಟನೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ, ಗೋವಾ ಸರ್ಕಾರ ಮತ್ತು ಆದರ್ಶ ಯುವ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಆದಿ ಲೋಕೋತ್ಸವ ಪುರಸ್ಕಾರಕ್ಕೆ ಕರ್ನಾಟಕದ ಪ್ರಮುಖರಾದ  ಜನಾರ್ದನ ಗೌಡ ಮುಚ್ಚೂರು ಹಾಗೂ ನೋಟರಿ ವಕೀಲ ವಿಜಯ ಗೌಡ ಶಿಬ್ರಿಕೆರೆ ಅವರು ಆಯ್ಕೆಯಾಗಿದ್ದಾರೆ.

ಗೋವಾ ರಾಜ್ಯದ ಕಾನಕೋಣದ ಕೋಟಿಗಾಂವ್ ವೈಲ್ಡ್ ಲೈಫ್ ಸೆಂಚುರಿ ಆದರ್ಶ ಗ್ರಾಮದಲ್ಲಿ ಜನವರಿ 9, 10 ಮತ್ತು 11, 2026 ರಂದು ಮೂರು ದಿನಗಳ ಕಾಲ 'ಗೋವಾ ಕೊಂಕಣಿ ಆದಿ ಲೋಕೋತ್ಸವ' ನಡೆಯಲಿದೆ. ಗೋವಾ ಸರ್ಕಾರದ ಸಂಸ್ಕೃತಿ, ಕ್ರೀಡೆ ಹಾಗೂ ಬುಡಕಟ್ಟು ಕಲ್ಯಾಣ ಸಚಿವ ಮತ್ತು ಕಾನಕೋಣ ಶಾಸಕ ಶ್ರೀ ರಮೇಶ್ ತವೊಡ್ಕರ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜನವರಿ 11ರಂದು ಬೆಳಿಗ್ಗೆ 10 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ಈ ಸಾಧಕರಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು.

ಜನಾರ್ದನ ಗೌಡ ಮುಚ್ಚೂರು: 

ಇವರು ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜನಪ್ರಿಯ ಸೇವೆ ಸಲ್ಲಿಸಿದ್ದಾರೆ. ಕುಡುಬಿ ಮಾತೃ ಸಂಘದ ಸ್ಥಾಪಕರಾಗಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಪದಾಧಿಕಾರಿಯಾಗಿ ಜನಾಂಗದ ಸಂಘಟನೆಗೆ ಶ್ರಮಿಸಿದ್ದಾರೆ. ತಮ್ಮ ಸ್ವಂತ ಟ್ರಸ್ಟ್ ಮೂಲಕ ಅಶಕ್ತ ರೋಗಿಗಳಿಗೆ ನೆರವು ನೀಡುತ್ತಾ ಸಮಾಜದ ಅಭಿವೃದ್ಧಿಗೆ ಕಾರಣರಾಗಿದ್ದಾರೆ.

ವಿಜಯ ಗೌಡ ಶಿಬ್ರಿಕೆರೆ: 

ಕುಡುಬಿ ಜನಾಂಗದ ಪ್ರಥಮ ವಕೀಲರಾದ ಇವರು ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಜಾನಪದ ಕಲಾವಿದರಾಗಿ ಮತ್ತು ರಾಜ್ಯ ಮಟ್ಟದ ಯೋಗಪಟುವಾಗಿ ಗುರುತಿಸಿಕೊಂಡಿದ್ದಾರೆ. 'ಜುವಾಂಕಾರ್ ಟ್ರಸ್ಟ್' ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಧನಸಹಾಯ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಸಭಾಭವನ ನಿರ್ಮಿಸಿ ಕುಡುಬಿ ಸಮಾಜದ ವಿವಿಧ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ.

ಕಳೆದ ವರ್ಷ ಎಡಪದವಿನಲ್ಲಿ ಇಬ್ಬರೂ ಸಾಧಕರು ಒಗ್ಗೂಡಿ ಹಮ್ಮಿಕೊಂಡಿದ್ದ 'ಕುಡ್ಮಿ ಸಿಗ್ಮೋ - 2025' ಕಾರ್ಯಕ್ರಮದ ಯಶಸ್ಸು ಮತ್ತು ಸಂಘಟನಾ ಶಕ್ತಿಯನ್ನು ಕಂಡು ಪ್ರಭಾವಿತರಾಗಿದ್ದ ಅಂದಿನ ಸ್ಪೀಕರ್ ರಮೇಶ್ ತವೊಡ್ಕರ್ ಅವರು, 400 ವರ್ಷಗಳ ಹಿಂದೆ ಗೋವಾದಿಂದ ವಲಸೆ ಹೋಗಿ ಪರಂಪರೆಯನ್ನು ಉಳಿಸಿಕೊಂಡಿರುವ ಈ ಸಾಧಕರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಾರೆ.

ಲೋಕೋತ್ಸವದ ವಿಶೇಷತೆಗಳು:

ಮೂರು ದಿನಗಳ ಈ ಸಂಭ್ರಮದಲ್ಲಿ ಕುಡುಬಿ ಸಮಾಜದ ಜಾನಪದ ಕಲೆ, ಸಾಹಿತ್ಯ ಸಂಸ್ಕೃತಿ ಮತ್ತು ಕವಿಗೋಷ್ಠಿಗಳು ನಡೆಯಲಿವೆ. ವಿಶೇಷವಾಗಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದ 'ಕುಣಬಿ ಗೆಡ್ಡೆ ಗೆಣಸು ಮೇಳ' ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಈ ಕಾರ್ಯಕ್ರಮವು ಈ ಹಿಂದೆ ಡಿಸೆಂಬರ್‌ನಲ್ಲಿ ನಿಗದಿಯಾಗಿತ್ತಾದರೂ, ಗೋವಾ ಜಿಲ್ಲಾ ಪಂಚಾಯತ್ ಚುನಾವಣಾ ನೀತಿ ಸಂಹಿತೆಯ ಕಾರಣದಿಂದಾಗಿ ಜನೆವರಿ ತಿಂಗಳಿಗೆ ಮುಂದೂಡಲ್ಪಟ್ಟಿತ್ತು. ಗೋವಾ ಮುಖ್ಯಮಂತ್ರಿಗಳು ಹಾಗೂ ಸಚಿವರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article