ಸಾಯಿ ಮಾರ್ನಾಡ್ ಸೇವಾ ಸಂಘದಿಂದ ಚಿಕಿತ್ಸೆಗೆ ನೆರವು
ಸಂಘದ ಸೇವಾ ಯೋಜನೆ–86ರ ಅಡಿಯಲ್ಲಿ ಜನವರಿ ತಿಂಗಳ ಮೊದಲ ಯೋಜನೆಯಾಗಿ ಈ ನೆರವು ವಿತರಿಸಲಾಯಿತು.
ಅಶೋಕ ಪರವ ಅವರು ಕಳೆದ ನಾಲ್ಕು ತಿಂಗಳಿನಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಮಂಗಳೂರಿನ ಕೆಎಂಸಿ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಎರಡು ಕೀಮೋಥೆರಪಿ ಪೂರ್ಣಗೊಂಡಿದ್ದು, ಇನ್ನೂ ನಾಲ್ಕು ಕೀಮೋ ಚಿಕಿತ್ಸೆ ಅಗತ್ಯವಿದೆ. ನಂತರ ಸಿಟಿ ಸ್ಕ್ಯಾನ್ ನಡೆಸಿ ಮುಂದಿನ ಚಿಕಿತ್ಸೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಈವರೆಗೆ ಸುಮಾರು 3.5 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಮುಂದಿನ ಚಿಕಿತ್ಸೆಗೆ ಇನ್ನೂ ಸುಮಾರು 10 ಲಕ್ಷ ರೂಪಾಯಿ ಅಗತ್ಯವಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಅಶೋಕ ಪರವ ಅವರ ಪತ್ನಿ ಗೃಹಿಣಿಯಾಗಿದ್ದು, ಕುಟುಂಬದಲ್ಲಿ ಇಬ್ಬರು ಮಕ್ಕಳು ಇದ್ದಾರೆ. ಹಿರಿಯ ಮಗಳು 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಿರಿಯ ಮಗ ಅಂಗನವಾಡಿಗೆ ತೆರಳುತ್ತಿದ್ದಾನೆ. ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದ ಅಶೋಕ ಪರವ ಅವರು ಇದೀಗ ಹಾಸಿಗೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವುದರಿಂದ ದೈನಂದಿನ ಜೀವನ ಹಾಗೂ ಆಸ್ಪತ್ರೆ ವೆಚ್ಚ ಭರಿಸುವುದು ಕುಟುಂಬಕ್ಕೆ ತೀವ್ರ ಸಂಕಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ ವತಿಯಿಂದ ರೂ.10,000 ಸೇವಾ ಧನವನ್ನು ಸೋಮವಾರ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಹಸ್ತಾಂತರಿಸಲಾಯಿತು.