ಕಂಬಳ ಕ್ಷೇತ್ರಕ್ಕೆ ಹೊಸತನದ ರೂಪು ಕೊಟ್ಟ ಪುತ್ತೂರು: ಜ.24-25 ರಂದು ಪುತ್ತೂರು ‘ಕೋಟಿ ಚೆನ್ನಯ’ ಜೋಡುಕರೆ ಕಂಬಳ

ಕಂಬಳ ಕ್ಷೇತ್ರಕ್ಕೆ ಹೊಸತನದ ರೂಪು ಕೊಟ್ಟ ಪುತ್ತೂರು: ಜ.24-25 ರಂದು ಪುತ್ತೂರು ‘ಕೋಟಿ ಚೆನ್ನಯ’ ಜೋಡುಕರೆ ಕಂಬಳ


ಪುತ್ತೂರು: ಕಂಬಳ ಕ್ಷೇತ್ರಕ್ಕೆ ಹಲವು ಹೊಸತನಗಳನ್ನು ನೀಡಿದ ಪ್ರತಿಷ್ಟಿತ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಪುತ್ತೂರು ಮಹಾಲಿಂಗೇಶ್ವರ ದೇವಳದ ದೇವರ ಮಾರು ಗದ್ದೆಯಲ್ಲಿ ಜ.24 ಮತ್ತು 25ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಅವರು ತಿಳಿಸಿದರು. 

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ,  ಸುಮಾರು 200 ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇರುವ ಪುತ್ತೂರು ಕಂಬಳಕ್ಕೆ 32 ವರ್ಷಗಳ ಇತಿಹಾಸವಿದೆ. ಈ ಬಾರಿ 33ನೇ ವರ್ಷದ ಕಂಬಳ ಉತ್ಸವ ನಡೆಯುತ್ತಿದೆ. 24ರಂದು ಬೆಳಗ್ಗೆ 10.32ಕ್ಕೆ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯ ಜೋಡುಕರೆಯಲ್ಲಿ ಕಂಬಳವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು  ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸಲಿದ್ದಾರೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ರೈ ವಹಿಸಲಿದ್ದಾರೆ. ಸ್ಪೀಕರ್ ಯು.ಟಿ. ಖಾದರ್ ಗೌರವ ಉಪಸ್ಥಿತಿ ಇರಲಿದ್ದಾರೆ. ರಾಜ್ಯ ಲೋಕೋಪಯೋಗಿ ಖಾತೆಯ ಸಚಿವ ಸತೀಶ್ ಜಾರಕಿಹೊಳಿ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಸಿನಿಮಾ ತಾರೆಯರು ಕಂಬಳಕ್ಕೆ ಆಗಮಿಸಲಿದ್ದಾರೆ. 25ರಂದು ಕಂಬಳ ಸಮಾಪನಗೊಂಡ ಬಳಿಕ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಲಿದೆ. ನೇಗಿಲು ಹಿರಿಯ, ನೇಗಿಲು ಕಿರಿಯ, ಕನೆಹಲಗೆ, ಅಡ್ಡ ಹಲಗೆ, ಹಗ್ಗ ಕಿರಿಯ, ಹಗ್ಗ ಹಿರಿಯ ವಿಭಾಗದಲ್ಲಿ ಕಂಬಳ ನಡೆಯಲಿದೆ ಎಂದರು.

ಕಂಬಳ ಕ್ಷೇತ್ರದ ಹೊಸಚಿಂತನೆಗಳು..

 ಬಾರಿಗೆ ವಿಜೇತರಿಗೆ 2 ಪವನ್ ಚಿನ್ನ ನೀಡುವ ಪರಿಪಾಠ ಆರಂಭಿಸಿದ್ದು, ಅಕ್ಕಿ, ಹುರುಳಿ, ಮೊತ್ತಮೊದಲ ಬಾರಿಗೆ ಕಂಬಳದ ಕರೆಯಲ್ಲಿ ರಾಜ್ಯ ಮಟ್ಟದ ಕೆಸರುಗದ್ದೆ ಓಟ ಮತ್ತಿತರ ಹೊಸತನಗಳ ಚಿಂತನೆಯನ್ನು ಕಂಬಳಕ್ಷೇತ್ರಕ್ಕೆ ಕೊಟ್ಟಿರುವುದು ಪುತ್ತೂರು ಕಂಬಳ ಸಮಿತಿ. ಈ ಬಾರಿ ಮತ್ತೆರಡು ಹೊಸ ಚಿಂತನೆಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ. ರಾಜ್ಯಮಟ್ಟದ ಕೆಸರುಗದ್ದೆ ಓಟದ ಜತೆಗೆ ಈ ಬಾರಿ ಆಯ್ದ 8 ತಂಡಗಳ ನಡುವೆ ಕೆಸರುಗದ್ದೆ ರಿಲೇ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಕಂಬಳದಲ್ಲಿ ಭಾಗವಹಿಸುವ ಎಲ್ಲಾ ಕೋಣಗಳ ಮಾಲಕರಿಗೆ ಪದಕ ನೀಡುವ ಚಿಂತನೆಯನ್ನೂ ಈ ಬಾರಿ ಅಳವಡಿಸಿಕೊಳ್ಳಲಾಗಿದೆ. ಕಳೆದ ಬಾರಿ ಆರಂಭಿಸಿದ ಕೋಟಿ-ಚೆನ್ನಯ ಟ್ರೋಫಿ ನೀಡಿಕೆ ಈ ಸಲವೂ ಮುಂದುವರಿಯಲಿದೆ.

ರಿಲೇ ಸ್ಪರ್ಧೆಯ ಪ್ರಥಮಸ್ಥಾನಿ ತಂಡಕ್ಕೆ ರೂ.25 ಸಾವಿರ, ದ್ವಿತೀಯಸ್ಥಾನಿಗೆ ರೂ.15 ಸಾವಿರ ಹಾಗೂ ತೃತೀಯಸ್ಥಾನಿಗೆ ರೂ.10 ಸಾವಿರ ಹಾಗೂ ಪದಕಗಳನ್ನು ನೀಡಲಾಗುವುದು. ವೈಯುಕ್ತಿಕ ಓಟದ ಪ್ರಥಮಸ್ಥಾನಿಗೆ ರೂ.15 ಸಾವಿರ, ದ್ವಿತೀಯ ಸ್ಥಾನಿಗೆ ರೂ.10 ಸಾವಿರ ಹಾಗೂ ತೃತೀಯಸ್ಥಾನಿಗೆ ರೂ.5 ಸಾವಿರ ಹಾಗೂ ಪದಕಗಳನ್ನು ನೀಡಲಾಗುವುದು. ಭವಿಷ್ಯದಲ್ಲಿ ಕಂಬಳದ ಓಟಗಾರರನ್ನು ರೂಪಿಸುವ ನಿಟ್ಟಿನಲ್ಲಿ ಈ ಚಿಂತನೆಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. 

ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಕೋಶಾಧಿಕಾರಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ನಿರಂಜನ ರೈ ಮಠಂತಬೆಟ್ಟು, ರೋಶನ್ ರೈ ಬನ್ನೂರು, ಸದಸ್ಯ ಶಿವಪ್ರಸಾದ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article