ಸಂತ ಫಿಲೋಮಿನಾ ಕಲೇಜಿನಲ್ಲಿ ಡೇಟಾ ಅನಲಿಟಿಕ್ಸ್ ಕೋರ್ಸ್‌ನ ಸಮಾರೋಪ ಸಮಾರಂಭ
Friday, January 16, 2026
ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಗಣಕವಿಜ್ಞಾನ ವಿಭಾಗದ ವತಿಯಿಂದ ಐಬಿಎಂ ಹಾಗೂ ಐಸಿಟಿ ಅಕಾಡೆಮಿಯ ಸಹಯೋಗದೊಂದಿಗೆ ಪ್ರಾರಂಭಗೊಂಡ ಐದು ದಿನಗಳ ‘ಡೇಟಾ ಅನಲಿಟಿಕ್ಸ್ ಯುಸಿಂಗ್ ಪೈಥಾನ್’ ಕೋರ್ಸ್ನ ಸಮಾರೋಪ ಕಾರ್ಯಕ್ರಮವನ್ನು ಕಾಲೇಜಿನ ಗಣಕವಿಜ್ಞಾನ ಪ್ರಯೋಗಾಲಯದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ‘ಇಂದಿನ ಡಿಜಿಟಲ್ ಯುಗದಲ್ಲಿ ಡೇಟಾವು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಇಂದಿನ ಜ್ಞಾನಾಧಾರಿತ ಸಮಾಜದಲ್ಲಿ ಡೇಟಾ ಸಂಖ್ಯೆಗಳ ಹಾಗೂ ಪದಗಳ ಸಂಗ್ರಹವಲ್ಲ, ಅದು ನಿರ್ಧಾರಗಳ ಮೂಲ. ಡೇಟಾವನ್ನು ಅರ್ಥಪೂರ್ಣವಾಗಿ ದೃಶ್ಯ ರೂಪದಲ್ಲಿ ಪ್ರಸ್ತುತಪಡಿಸುವ ಸಾಮರ್ಥ್ಯ ಅತ್ಯಂತ ಅವಶ್ಯಕ ಕೌಶಲ್ಯವಾಗಿದೆ. ಈ ಕೋರ್ಸ್ ನಮ್ಮ ಸಂಸ್ಥೆಯ ಶೈಕ್ಷಣಿಕ ದೃಷ್ಟಿಕೋನವನ್ನು ಸ್ಪಷ್ಟಪಡಿಸುತ್ತದೆ ಹಾಗೂ ಪಠ್ಯ ಕ್ರಮದ ಹೊರತಾಗಿ ಕೈಗಾರಿಕಾ ಅಗತ್ಯಗಳಿಗೆ ಹೊಂದುವ ಮತ್ತು ವಿದ್ಯಾರ್ಥಿಗಳನ್ನು ಭವಿಷ್ಯಸಿದ್ಧರನ್ನಾಗಿಸುವ ಪ್ರಥಮ ಹೆಜ್ಜೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಸಾಮರ್ಥ್ಯ ಮಾತ್ರವಲ್ಲ, ವಿಶ್ಲೇಷಣಾತ್ಮಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳನ್ನೂ ವೃದ್ಧಿಸುತ್ತವೆ. ವಿದ್ಯಾರ್ಥಿಗಳು ಇಲ್ಲಿ ಪಡೆದ ಜ್ಞಾನವನ್ನು ಕೇವಲ ಪ್ರಮಾಣಪತ್ರದ ಮಟ್ಟಿಗೆ ಸೀಮಿತಗೊಳಿಸದೆ, ತಮ್ಮ ಕಲಿಕೆಯ ಪಯಣದಲ್ಲಿ ಪ್ರಾರಂಭವೆಂದು ತಿಳಿಯಬೇಕು. ನಮ್ಮ ವಿದ್ಯಾರ್ಥಿಗಳು ಡೇಟಾವನ್ನು ಪ್ರಶ್ನಿಸಿ, ವಿಶ್ಲೇಷಿಸಿ, ದೃಶ್ಯರೂಪಕ್ಕೆ ಪರಿವರ್ತಿಸಿ ಸಮಾಜಕ್ಕೆ ಅರ್ಥಪೂರ್ಣ ಪರಿಹಾರಗಳನ್ನು ನೀಡುವ ವೃತ್ತಿಪರರಾಗಿ ಬೆಳೆಯುವಂತಾಗಲಿ’ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಐಬಿಎಂ ಪ್ರಾಯೋಜಿತ ಡೇಟಾ ಅನಲಿಟಿಕ್ಸ್ ಕೋರ್ಸ್ನ ತರಬೇತುದಾರರಾದ ಸೈಯ್ಯದ್ ಖೈಸರ್ ಮಾತನಾಡಿ, ‘ಪದವಿ ಅಧ್ಯಯನದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಥೆಯು ನಿಗದಿತ ಪಠ್ಯಕ್ರಮದ ಹೊರತಾಗಿ ಉದಯೋನ್ಮುಖ ತಂತ್ರಜ್ಞಾನಗಳೇ ಮುಂತಾದ ಹೊಸವಿಷಯಗಳ ಕಲಿಕೆಗೆ ಅವಕಾಶ ಮಾಡಿಕೊಡುತ್ತವೆ. ಈ ರೀತಿ ದೊರೆಯುವ ಅವಕಾಶಗಳನ್ನು ಸದ್ಬಗಳಕೆ ಮಾಡಿಕೊಂಡು ಪದವಿ ಪ್ರಮಾಣಪತ್ರದೊಡನೆ ಇತರೆ ಪ್ರಮಾಣಪತ್ರಗಳನ್ನೂ ಪಡೆದುಕೊಂಡಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಬಹುದು. ನಿರಂತರ ಕಲಿಕೆ ಉನ್ನತಿಗೆ ದಾರಿ’ ಎಂದು ಹೇಳಿ ಡೇಟಾ ಅನಲಿಟಕ್ಸ್ ಯುಸಿಂಗ್ ಪೈಥಾನ್ ಕೋರ್ಸ್ ಅನ್ನು ಆಯ್ಕೆಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾಲೇಜಿನ ಗಣಕವಿಜ್ಞಾನ ವಿಭಾಗದ ಡೀನ್ ಹಾಗೂ ಪರೀಕ್ಷಾಂಗ ಕುಲಸಚಿವರೂ ಆದ ಡಾ. ವಿನಯಚಂದ್ರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋರ್ಸ್‌ನಲ್ಲಿ ಭಾಗವಹಿಸಿದ ತೃತೀಯ ಬಿಸಿಎ ವಿದ್ಯಾರ್ಥಿ ದರ್ಶನ್ ಹಾಗೂ ಸೃಜನಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಐಸಿಟಿ ಅಕಾಡೆಮಿಯ ಸಾಂಸ್ಥಿಕ ಸಂಯೋಜಯಕರೂ ಪರೀಕ್ಷಾಂಗ ಉಪಕುಲಸಚಿವರೂ ಆದ ಅಭಿಷೇಕ್ ಸುವರ್ಣ ವಂದಿಸಿದರು. ಕೋರ್ಸ್ನ ಪರಿವೀಕ್ಷಕರೂ ಗಣಕವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರೂ ಆದ ಸುರಕ್ಷಾ ಎಸ್. ಕಾರ್ಯಕ್ರಮ ನಿರೂಪಿಸಿದರು.



