ಎಸ್.ಡಿ.ಎಂ. ಕಾಲೇಜು: ಭಾರತ ತಂಡದ ಪ್ರಾಥಮಿಕ ತರಬೇತಿ ಶಿಬಿರಕ್ಕೆ ಚಿಂತನ್ ಬಿ.ಸಿ., ಪುನೀತ್ ಆಯ್ಕೆ-ದೆಹಲಿಯಲ್ಲಿ ನಡೆಯಲಿರುವ ‘ಏಷಿಯನ್ ನೆಟ್ ಬಾಲ್ ಚಾಂಪಿಯನ್ಶಿಪ್’ ಕ್ರೀಡಾಕೂಟ
ಮಡಿಕೇರಿಯ ಗೋಣಿಕೊಪ್ಪಲು ಮೂಲದ ಚೆನ್ನಪ್ಪ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರನಾದ ಪುನೀತ್ ಹಾಗೂ ಮೂಡುಬಿದಿರೆ ಎಡಪದವಿನ ಜನಾರ್ದನ ಗೌಡ ಮತ್ತು ವಿಜಯ ದಂಪತಿಗಳ ಪುನೀತ್ ಕುಮಾರ್ ಈ ಹಿಂದೆ ತುಮಕೂರಿನ ಸಿದ್ಧಾರ್ಥ್ ಇನ್ಸ್ಟಿಟ್ಯೂಟ್‌ನಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪುರುಷರ ನೆಟ್ ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿರುತ್ತಾರೆ. ಜೊತೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪುರುಷರ ನೆಟ್ ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುತ್ತಾರೆ.
ಕಾಲೇಜಿನ ಇದೇ ವಿದ್ಯಾರ್ಥಿಗಳು ಇತ್ತೀಚೆಗೆ ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿ ನಡೆದ 43ನೇ ಸೀನಿಯರ್ ನ್ಯಾಷನಲ್ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ತಮಿಳುನಾಡಿನಲ್ಲಿ ನಡೆದ ಸೀನಿಯರ್ ಸೌತ್ ನ್ಯಾಷನಲ್ ನೆಟ್ ಬಾಲ್ ಪಂದ್ಯಾಕೂಟದಲ್ಲೂ ಭಾಗವಹಿಸಿರುತ್ತಾರೆ.
ಏಷಿಯನ್ ನೆಟ್ ಬಾಲ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಅಂತಿಮ ಆಯ್ಕೆ ಪ್ರಕ್ರಿಯೆ ಫೆಬ್ರವರಿಯ ಮೊದಲ ವಾರದಲ್ಲಿ ನಡೆಯಲಿದ್ದು, ರಾಷ್ಟ್ರ ಮಟ್ಟದದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕ್ರೀಡಾ ಪಟುಗಳಿಗೆ ಉಜಿರೆಯ ಎಸ್.ಡಿ.ಎಂ ಕ್ರೀಡಾ ಸಂಘದ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪೂಜಾರಿ ತರಬೇತಿಯನ್ನು ನೀಡಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಎಸ್.ಡಿ.ಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಕಾಲೇಜಿನ ಪ್ರಾಚಾರ್ಯ ಪ್ರೊ. ವಿಶ್ವನಾಥ್ ಪಿ., ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ದೈಹಿಕ ಶಿಕ್ಷಣ ಉಪನ್ಯಾಸಕ ಮತ್ತು ತರಬೇತುದಾರ ಸುದೀನ್ ಪೂಜಾರಿ, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.