ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಬಾರದು ಎಂದು ಹೇಳುವ ಸ್ವಯಂಘೋಷಿತ ಬುದ್ಧಿಜೀವಿಗಳು ಮೂರ್ಖರು: ವೀಣಾ ಬನ್ನಂಜೆ
ಭಗವದ್ಗೀತೆ ಮತ್ತು ಶಿಕ್ಷಣ: ವೀಣಾ ಬನ್ನಂಜೆ ಅವರಿಂದ ವಿಶೇಷ ಉಪನ್ಯಾಸ
ಅವರು ಶುಕ್ರವಾರ ಉಜಿರೆಯಲ್ಲಿ ಎಸ್‌ಡಿಎಂ ಕಾಲೇಜಿನಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕನ್ನಡ ವಿಭಾಗದ ಆಶ್ರಯದಲ್ಲಿ ಕೀರ್ತಿಶೇಷ ಡಾ. ಬಿ. ಯಶೋವರ್ಮ ಸ್ಮರಣಾರ್ಥ ಆಯೋಜಿಸಿದ ‘ಅರಿವಿನ ದೀವಿಗೆ’ ಕಾರ್ಯಕ್ರಮದಲ್ಲಿ ‘ಭಗವದ್ಗೀತೆ ಮತ್ತು ಶಿಕ್ಷಣ’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕರ್ತವ್ಯದ ದೃಷ್ಟಿಯಿಂದ ಸೋಲು-ಗೆಲುವಿನ ಬಗ್ಗೆ ಚಿಂತಿಸದೆ, ಪ್ರತಿಫಲಾಪೇಕ್ಷೆ ಇಲ್ಲದೆ ಕರ್ಮವನ್ನು ಮಾಡಬೇಕು ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಗುರುವು ಶಿಷ್ಯನ ದೌರ್ಬಲ್ಯಗಳನ್ನು ಗುರುತಿಸಿ, ಆತನಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಬೇಕು. ಶಿಷ್ಯರಲ್ಲಿಯೂ ಪ್ರಾಮಾಣಿಕತೆ, ನಿಷ್ಠೆ ಮತ್ತು ಬದ್ಧತೆ ಇರಬೇಕು. ‘ನಾನು’ ಎಂಬ ಅಂಹಕಾರ, ಮಮಕಾರ ತ್ಯಜಿಸಬೇಕು. ಕ್ರೀಡೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಆರೋಗ್ಯಭಾಗ್ಯ ರಕ್ಷಣೆಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ತಂದೆ-ತಾಯಿ ಮತ್ತು ಗುರುಗಳು ಮಕ್ಕಳ ಆಸಕ್ತಿ, ಪ್ರತಿಭೆ ಮತ್ತು ಹವ್ಯಾಸಗಳನ್ನು ಗುರುತಿಸಿ ಪ್ರೊತ್ಸಾಹಿಸಿದಾಗ ಮಾತ್ರ ಶಿಕ್ಷಣದ ಮೂಲಕ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಧ್ಯಾನ, ಭಕ್ತಿಯ ಮೂಲಕ ಪರಮ ಸತ್ಯಗಳನ್ನು ಸೋತವರಿಗೆ ತಿಳಿಸಿದಾಗ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಭಗವದ್ಗೀತೆ, ವೇದ, ಪುರಾಣಗಳನ್ನು ಅಧ್ಯಯನ ಮಾಡಿ ರಾಮ, ಕೃಷ್ಣರಂತಹ ಮಹಾಪುರುಷರ ಸದ್ಗುಣಗಳನ್ನು ನಾವು ಅನುಷ್ಠಾನಗೊಳಿಸಿದಾಗ ಜೀವನ ಪಾವನವಾಗುತ್ತದೆ. ತನ್ಮೂಲಕ ಲೋಕಕಲ್ಯಾಣವಾಗುತ್ತದೆ ಎಂದು ವೀಣಾ ಬನ್ನಂಜೆ ಹೇಳಿದರು.
ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಸುಪ್ರಿಯಾಹರ್ಷೇಂದ್ರ ಕುಮಾರ್, ಸೋನಿಯಾವರ್ಮ, ಪೂರನ್‌ವರ್ಮ ಉಪಸ್ಥಿತರಿದ್ದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ. ಡಾ. ಪ್ರದೀಪ್ ನಾವೂರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.
ಡಾ. ಶ್ರೀಧರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ದಿವ ಕೊಕ್ಕಡ ಉಪಸ್ಥಿತರಿದ್ದು ಸಹಕರಿಸಿದರು.
