ಜಾಲತಾಣದಲ್ಲಿ ಪ್ರಚೋದನಾತ್ಮಕ ಪೋಸ್ಟ್: ಇಬ್ಬರ ಬಂಧನ
Friday, January 30, 2026
ಕುಂದಾಪುರ: ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಮತ್ತು ಅಶಾಂತಿ ಉಂಟುಮಾಡುವ ಉದ್ದೇಶದಿಂದ ಪ್ರಚೋದನಾತ್ಮಕ ಪೋಸ್ಟ್‌ಗಳನ್ನು ಹರಡಿದ ಆರೋಪದಡಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೋಟೇಶ್ವರ ಅಂಕದ ಕಟ್ಟೆಯ ಉದ್ಯಮಿ ಕೆ.ನಾಗರಾಜ್ ಹಾಗೂ ಬ್ಯಾಂಕ್ ಉದ್ಯೋಗಿ ವಡ್ಡರ್ಸೆಯ ಸಂತೋಷ್ ಕುಮಾರ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 196(1), 353(2) ಜೊತೆಗೆ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆ ಉಡುಪಿ ಉಪವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ. ಅವರ ನಿರ್ದೇಶನ ಹಾಗೂ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ನಡೆದಿದೆ. ಪ್ರಕರಣದ ತನಿಖೆಯನ್ನು ಪೊಲೀಸ್ ಉಪ ನಿರೀಕ್ಷಕ ಅಶೋಕ ಮಾಳಾಬಗಿ ನೇತೃತ್ವದಲ್ಲಿ ಸುದರ್ಶನ್ ದೊಡ್ಡಮನಿ ಹಾಗೂ ಠಾಣಾ ಸಿಬ್ಬಂದಿಯವರು ನಡೆಸಿದ್ದರು.
ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆಯನ್ನು ಕದಡುವ ಯಾವುದೇ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.