ಸಿಟ್ಟಿಗೆದ್ದ ಪುರವಾಸಿಗಳಿಂದ ಪುರಸಭೆಗೆ ಬೀಗ: ಬಂಟ್ವಾಳ ಠಾಣೆಯಲ್ಲಿ ಕೇಸು ದಾಖಲು
ಕಚೇರಿಯ ಮುಖ್ಯ ದ್ವಾರಕ್ಕೆ ಬೀಗ ಜಡಿದು ಪುರಸಭಾ ಸಿಬ್ಬಂದಿಗಳನ್ನು ದಿಗ್ಬಂಧನದಲ್ಲಿರಿಸಿರುವುದು ಮತ್ತು ಅಗತ್ತದ ಕೆಲಸಕ್ಕಾಗಿ ಕಚೇರಿಗೆ ಬರುವ ನಾಗರಿಕರಿಗೂ ಪ್ರವೇಶಿಸದಂತೆ ತಡೆ ಒಡ್ಡಿರುವ ಆರೋಪದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿಕೇಸು ದಾಖಲಾಗಿದೆ.
ಮುಖ್ಯಾಧಿಕಾರಿ ತೀರ್ಥ ಪ್ರಸಾದ್ ಅವರ ದೂರಿನಂತೆ ಸುಮಾರು 50 ರಷ್ಟು ಮಂದಿಯ ವಿರುದ್ಧ ಕೇಸು ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಶುಕ್ರವಾರ ಪ್ರತಿಭಟನೆಯ ಹೊತ್ತಿನಲ್ಲೇ ಪೊಲೀಸರು ಕೇಸು ದಾಖಲಿಸಿಕೊಳ್ಳುವ ಸಾಧ್ಯತೆಯ ಸುಳಿವು ಪುರಸಭಾ ಅವರಣದಲ್ಲಿಯೇ ಹರಿದಾಡಿತ್ತು. ಕಚೇರಿಯೊಳಗೆ ಅಧಿಕಾರಿಗಳ ಮತ್ತು ರಾಜಕೀಯ ಮುಖಂಡರ ಸಮಾಲೋಚನೆ ನಡೆಯುತ್ತಿದ್ದಂತೆ ಪ್ರತಿಭಟನಾಕಾರರ ಪೈಕಿ ಮಹಿಳೆಯರ ಸಹಿತ ಬಹುತೇಕ ಮಂದಿ ತೆರಳಿದ್ದರು.
ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಪೊಲೀಸರು ಮುಖ್ಯಾಧಿಕಾರಿಯಿಂದ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಳ್ಳುವ ಕುರಿತು ಪುರಸಭಾ ಅವರಣದಲ್ಲೇ ಚರ್ಚೆನಡೆಸಿದ್ದರು.
ಶನಿವಾರ ನಿರೀಕ್ಷೆಯಂತೆ ಮುಖ್ಯಾಧಿಕಾರಿಯವರ ದೂರಿನನ್ವಯ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಚೇರಿಗೆ ಬೀಗ ಜಡಿದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಪ್‌ಋಇಭಟನಾಕಾರರ ನಡುವೆ ಮಾತಿನ ಚಕಮಕಿಯು ನಡೆದಿತ್ತು. ತಾಲೂಕು ದಂಡಾಧಿಕಾರಿ ಮಂಜುನಾಥ್ ಅವರು ಅಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಬೀಗ ತೆರವುಗೊಲೀಸಿದ್ದರೂ, ಬಾಗಿಲು ಮುಚ್ಚಲಾಗಿತ್ತು.
ಇದೀಗ ಎರಡು ದಿನಗಳ ಕಾಲ ಯಾವುದೇ ಪೂರ್ವಸೂಚನೆ ನೀಡದೆ ಮೂಲಭೂತ ಸೌಕರ್ಯಗಳಲ್ಲೊಂದಾದ ಕುಡಿಯುವ ನೀರನ್ನು ಸಂಪೂರ್ಣ ಸ್ಥಗಿತಗೊಳಿಸಿ ತೆರಿಗೆದಾರರು ತೊಂದರೆ ಅನುಭವಿಸಿದಕ್ಕೆ ಯಾರ ಮೇಲೆ, ಯಾರು ಕ್ರಮ ಕೈಗೊಳ್ಳುತ್ತಾರೆ.
ಕಳೆದ ಮೂರು ತಿಂಗಳಿನಿಂದ ದಿನಕೂಲಿ, ಹೊರಗುತ್ತಿಗೆ, ಗೌರವಧನ ಅಧಾರದಲ್ಲಿ ದುಡಿಯುವ ನೌಕರರಿಗೆ ವೇತನ ಪಾವತಿಸದ ವಿಚಾರ ಜಿಲ್ಲಾಧಿಕಾರಿಯಿಂದ ಹಿಡಿದು ಎಲ್ಲಾ ಅಧಿಕಾರಿಗಳು ಮಾಹಿತಿ ಇದ್ದರೂ ಅದನ್ನು ಬಗೆಹರಿಸುವಲ್ಲಿ ಪ್ರಯತ್ನಿಸದ ಹಿನ್ನಲೆಯಲ್ಲಿ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡಿ ಸಾರ್ವಜನಿಕರು ಎರಡುದಿನ ಪರದಾಡಬೇಕಾಯಿತು. ಇದಕ್ಕೆ ಯಾರನ್ನು ಹೊಣೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಪುರವಾಸಿಗಳಿಂದ ವ್ಯಕ್ತವಾಗಿದೆ.