ರಥಬೀದಿ ಕಾಲೇಜಿನಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ
Thursday, February 19, 2026
ಮಂಗಳೂರು: ಇಲ್ಲಿನ ರಥಬದಿಯಲ್ಲಿರುವ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಯುವ ರೆಡ್‌ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮತ್ತು ಯೆನೆಪೋಯ ವೈದ್ಯಕೀಯ ಕಾಲೇಜು, ದೇರಳಕಟ್ಟೆ, ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಆರೋಗ್ಯ ಮಾಹಿತಿ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ಇಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ವೈದ್ಯಾಧಿಕಾರಿ ಡಾ. ರೇಷ್ಮ ಟಿ.ಎಮ್. ಅವರು ಭಾಗವಹಿಸಿ ಕ್ಯಾನ್ಸರ್ ರೋಗದ ಗುಣಲಕ್ಷಣಗಳು, ರೋಗ ನಿಧಾನ, ರೋಗ ಚಿಕಿತ್ಸಾ ವಿಧಾನಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿ, ವಿದ್ಯಾರ್ಥಿಗಳು ಹಾಗೂ ಬೋಧಕರ ಸಂದೇಹಗಳನ್ನು ಪರಿಹರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ವಹಿಸಿ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳಿಂದ ಪಡೆಯುವ ಅರಿವಿನ ನೆರವಿನಿಂದ ವಿದ್ಯಾರ್ಥಿಗಳು ಆರೋಗ್ಯದ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ., ಯುವ ರೆಡ್‌ಕ್ರಾಸ್, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಮಹಿಳಾ ವೇದಿಕೆ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಗಳ ಸಂಯೋಜಕರು, ಸಹ ಸಂಯೋಜಕರು, ಯೆನೆಪೋಯ ಆಸ್ಪತ್ರೆಯ ಅರೋಗ್ಯ ನಿರೀಕ್ಷಕರು ಉಪಸ್ಥಿತರಿದ್ದರು.
ತ್ರಿಷಾ ಅತಿಥಿಗಳನ್ನು ಪರಿಚಯಿಸಿದರು. ಸ್ವಾತಿ ಸ್ವಾಗತಿಸಿ, ಶರಣ್ಯ ವಂದಿಸಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಸ್ವಯಂ ಸೇವಕರು, ಯುವ ರೆಡ್‌ಕ್ರಾಸ್ ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಾಗಾರದ ಫಲಾನುಭವಿಗಳಗಿದ್ದರು.
