ಮೂಡುಬಿದಿರೆಯಲ್ಲಿ ಸಂತ ಸಮ್ಮೇಳನ: ಧರ್ಮಸ್ಥಳ ಧರ್ಮಾಧಿಕಾರಿ ಹೆಗ್ಗಡೆಯವರಿಗೆ ಆಹ್ವಾನ
ಮೂಡುಬಿದಿರೆ: ಇಲ್ಲಿನ ಜೈನ ಮಠದ ಧವಳತ್ರಯ ಟ್ರಸ್ಟ್ ಹಾಗೂ ಶ್ರೀ ದಿಗಂಬರ ಜೈನ ಮಠದ ಆಶ್ರಯದಲ್ಲಿ, ಪೂಜ್ಯ ಸ್ವಸ್ತಿ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಸ್ವಾಮಿಗಳು ಅವರ ಸಾರಥ್ಯದಲ್ಲಿ ಫೆಬ್ರವರಿ 26ರಂದು ನಡೆಯಲಿರುವ ಭಾರತೀಯ ಸಂತ ಮಹಾಪರಿಷತ್ತಿನ ಪ್ರಾಂತೀಯ ಸಂತ ಸಮ್ಮೇಳನದ ಅಂಗವಾಗಿ, ಸಂತ ಸಮ್ಮೇಳನ ಸಮಿತಿಯ ಪದಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.
ಈ ವೇಳೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಸಮ್ಮೇಳನದ ರೂಪುರೇಷೆಗಳ ಕುರಿತು ಸಮಾಲೋಚನೆ ನಡೆಸಿ, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಆಮಂತ್ರಿಸಿದರು.
ಎಸ್‌ಕೆಡಿಆರ್‌ಡಿಪಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಮಹಾವೀರ ಅಜ್ರಿ, ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಉಪಸ್ಥಿತರಿದ್ದರು. ಜೊತೆಗೆ ಸಂತ ಸಮ್ಮೇಳನ ಸ್ವಾಗತ ಸಮಿತಿಯ ಸಂಚಾಲಕ ಎಂ. ಬಾಹುಬಲಿ ಪ್ರಸಾದ್, ಕಾರ್ಯದರ್ಶಿ ಎಂ. ಶಾಂತರಾಮ ಕುಡ್ವ, ಜಂಟಿ ಕಾರ್ಯದರ್ಶಿಗಳಾದ ಕೆ. ಶಿವ ಭಂಡಾರ್ಕರ್ ಹಾಗೂ ಎಂ. ರಾಘವೇಂದ್ರ ಭಂಡಾರ್ಕರ್, ಭಾರತೀಯ ಸಂತ ಮಹಾಪರಿಷತ್ತಿನ ಸಂತ ಸಂಪರ್ಕ ಸಂಚಾಲಕ ಆಕಾಶ್ ವಿಶ್ವಾಮಿತ್ರ ಹಾಗೂ ಕೊಪ್ಪದ ಸೋಮಯಾಜಿ ದಂಪತಿಗಳು ಉಪಸ್ಥಿತರಿದ್ದರು.