ರೈತರಿಂದ ಪೊಲೀಸ್ ಠಾಣೆ ಮುಂಭಾಗ ಧರಣಿ: ರೈತ ಮುಖಂಡನ ಬಿಡುಗಡೆ
Monday, February 16, 2026
ಮೂಡುಬಿದಿರೆ: ಸೋಮವಾರ ಬೆಳಗ್ಗೆ ಬಡಗಮಿಜಾರು ಗ್ರಾಮದ ಮಂಜನಬೈಲಿನಲ್ಲಿ ರೈತರನ್ನು ಸೇರಿಸಿ ಕಂದಾಯ ಅಧಿಕಾರಿಗಳ ಕತ೯ವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇರೆಗೆ ಹೋರಾಟಗಾರ, ರೈತ ಮುಖಂಡ ಅಲ್ಫೋನ್ಸ್ ಡಿ’ಸೋಜ ಅವರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಮೂಡುಬಿದಿರೆ ಪೊಲೀಸ್ ಠಾಣೆ ಎದುರು ರೈತರು ಧರಣಿ ನಡೆಸಿದರು.
ಪ್ರತಿಭಟನೆ ವೇಳೆ ರೈತ ಮುಖಂಡ, ವಕೀಲ ಶಾಂತಿ ಪ್ರಸಾದ್ ಹೆಗ್ಡೆ ಮಾತನಾಡಿ ಕಂಪೆನಿಯು ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿಯ ಆದೇಶಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಆರೋಪಿಸಿದರು. ರೈತರಿಗೆ ಪರಿಹಾರ ಮೊತ್ತವನ್ನು ಡೆಪಾಸಿಟ್ ಮಾಡಿದ ಬಳಿಕ ಮಾತ್ರ ಕಾಮಗಾರಿ ಮುಂದುವರಿಸಬೇಕು ಎಂದು ಆಗ್ರಹಿಸಿದರು. ರೈತರ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಸಂತ್ರಸ್ತ ರೈತರನ್ನು ಬಂಧಿಸಿ ಸುಳ್ಳು ಪ್ರಕರಣ ದಾಖಲಿಸಿದರೆ ಅಥವಾ ಅನಾವಶ್ಯವಾಗಿ ಠಾಣೆಗೆ ಕರೆದುಕೊಂಡು ಬಂದರೆ ಉಪವಾಸ ಸತ್ಯಾಗ್ರಹ, ಆಹೋರಾತ್ರಿ ಧರಣಿ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಈ ವೇಳೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಮುಖಂಡರು ಹಾಗೂ ಕಂಪೆನಿ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ನಂತರ ಅಲ್ಫೋನ್ಸ್ ಅವರನ್ನು ಬಿಡುಗಡೆಗೊಳಿಸಲಾಯಿತು.
ಧರಣಿಯಲ್ಲಿ ವಲೇರಿಯನ್ ಕುಟಿನ್ಹಾ, ರಾಜೇಶ್ ಕಾಳೂರು, ರಾಧಾಕೃಷ್ಣ ಶೆಟ್ಟಿ, ಹೊನ್ನಪ್ಪ ಗೌಡ, ನೇಮಿರಾಜ್, ಇನ್ನಾ ಚಂದ್ರಹಾಸ ಶೆಟ್ಟಿ, ಜಾಕಿಂ ಕೊರೆಯ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

