ಬಿಲ್ಡರ್ ವಿರುದ್ಧ ಎಫ್‌ಐಆರ್
ಮಂಗಳೂರು: ನಗರದ ಬಿಲ್ಡರ್‌ರೊಬ್ಬರು ಯುವಕರಿಬ್ಬರಿಗೆ ಗನ್ ತೋರಿಸಿ ಜೀವ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿ ಕೋರ್ಟ್ ಸೂಚನೆಯಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
2024ರ ಅ.9ರಂದು ತನುಷ್ ಶೆಟ್ಟಿ ಮತ್ತು ಅವರ ಸ್ನೇಹಿತ ಅಂಕಿತ್ ಬಜ್ಪೆಯಿಂದ ಕದ್ರಿಗೆ ಬರುತ್ತಿದ್ದಾಗ ವಾಹನ ಸೈಡ್ ಕೊಡುವ ವಿಚಾರದಲ್ಲಿ ಜತೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಆ ಬಳಿಕ ಯುವಕರಿಬ್ಬರು ಕಾರನ್ನು ಫಾಲೋ ಮಾಡಿ ಬಂದು ಬಿಲ್ಡರ್ ಮನೆಯ ಕಂಪೌಂಡ್ ಒಳ ಪ್ರವೇಶಿಸಿದ್ದಾರೆ. ಈ ಸಂದರ್ಭ ಮೂವರ ಮಧ್ಯೆ ಭಾರೀ ಚರ್ಚೆ ನಡೆದಿದೆ. ಈ ಬಗ್ಗೆ ಬಿಲ್ಡರ್ ನೀಡಿದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನುಷ್ ಮತ್ತು ಅಂಕಿತ್‌ರನ್ನು ಬಂಧಿಸಿದ್ದರು.
ಯುವಕರ ಪ್ರತಿದೂರು..
ಜೈಲಿನಿಂದ ಬಿಡುಗಡೆಯಾದ ಬಳಿಕ ಯುವಕರು ತಾವೇನೂ ಹಲ್ಲೆ ಮಾಡಿಲ್ಲ, ತಮ್ಮ ಮೇಲೆ ಗನ್ ತೋರಿಸಿ ಜೀವ ಬೆದರಿಕೆ ಒಡ್ಡಿದ್ದರು, ಬಿಲ್ಡರ್ ಪುತ್ರಿ ಯುವಕರನ್ನು ಶೂಟ್ ಮಾಡುವಂತೆ ತಂದೆಗೆ ಪ್ರಚೋದನೆ ನೀಡಿದ್ದರು ಎಂದು ಆರೋಪಿಸಿ ದೂರು ನೀಡಲಾಗಿತ್ತು. ಈ ಬಗ್ಗೆ ಯುವಕರು ಪ್ರತಿ ದೂರು ನೀಡಿದರೂ ಪೊಲೀಸರು ಕೇಸು ದಾಖಲಿಸಿರಲಿಲ್ಲ ಎನ್ನಲಾಗಿದೆ.
ಖಾಸಗಿ ದೂರು..
ಜೈಲಿನಿಂದ ಹೊರ ಬಂದ ಬಳಿಕ ತನುಷ್ ಮತ್ತು ಅಂಕಿತ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಇದೀಗ ದೂರು ದಾಖಲಿಸಿ ತನಿಖೆ ಮಾಡುವಂತೆ ನ್ಯಾಯಾಲಯವು ಪೊಲೀಸರಿಗೆ 1ವರ್ಷದ ಬಳಿಕ ಆದೇಶ ಮಾಡಿದ್ದು, ಫೆ.5ರಂದು ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.