ಕಾಮಗಾರಿಯ ಧೂಳು-ವಿದ್ಯಾರ್ಥಿನಿಯರ ಪ್ರತಿಭಟನೆ: ಮಾಹಿತಿ ನೀಡದ ಪ್ರಿನ್ಸಿಪಾಲ್‌ಗೆ ಶಾಸಕರಿಂದ ಕ್ಲಾಸ್

ಕಾಮಗಾರಿಯ ಧೂಳು-ವಿದ್ಯಾರ್ಥಿನಿಯರ ಪ್ರತಿಭಟನೆ: ಮಾಹಿತಿ ನೀಡದ ಪ್ರಿನ್ಸಿಪಾಲ್‌ಗೆ ಶಾಸಕರಿಂದ ಕ್ಲಾಸ್


ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿರುವ ಕಾಮಗಾರಿಯಿಂದ ಉಂಟಾಗುವ ಧೂಳು ಪಕ್ಕದಲ್ಲಿರುವ ಮಹಿಳಾ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಪಾಲಿಗೆ ಸಂಕಷ್ಟು ಉಂಟಾಗಿದ್ದು, ಇದನ್ನು ವಿರೋಧಿಸಿ ಸೋಮವಾರ ವಿದ್ಯಾರ್ಥಿನಿಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. 

ಕಳೆದ ಕೆಲ ದಿನಗಳಿಂದ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರ ಕಟ್ಟಡ ಕಾಮಗಾರಿ ಕೆಲಸ ನಡೆಯುತ್ತಿದೆ. ಇದರಿಂದ ಬರುವ ಧೂಳು ವಿದ್ಯಾರ್ಥಿನಿಯರ ಆರೋಗ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಈಗಾಗಲೇ ಕೆಲ ಮಂದಿ ವಿದ್ಯಾರ್ಥಿನಿಯರಿಗೆ ಧೂಳಿನಿಂದಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.  ಕಾಲೇಜಿನಲ್ಲಿ ಕುಳತುಕೊಳ್ಳಲೂ ಸಾಧ್ಯವಿಲ್ಲದಷ್ಟು ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಶೋಕ್ ರೈ ಅವರು ಕಾಲೇಜು ಸಮಯದಲ್ಲಿ ಯಾವುದೇ ಕೆಲಸ ಮಾಡದಂತೆ ಇಂಜಿನಿಯರ್‌ಗೆ ಸೂಚಿಸಿದರು. ಇಂತಹ ಸಮಸ್ಯೆ ಉಂಟಾಗಿದ್ದರೂ, ಮಕ್ಕಳ ಆರೋಗ್ಯಕ್ಕೆ ಸಮಸ್ಯೆಯಾಗಿದ್ದರೂ ತನ್ನ ಗಮನಕ್ಕೆ ತರದ ಕಾಲೇಜಿನ ಪ್ರಾಂಶುಪಾಲರನ್ನು  ತರಾಟೆಗೆ ತೆಗೆದುಕೊಂಡ ಶಾಸಕರು  ಮಕ್ಕಳ ಮೂಲಕ ರಾಜಕೀಯ ಮಾಡಿಸುವ ಕೆಲಸಕ್ಕೆ ಮುಂದಾಗಿದ್ದೀರಿ. ಮಕ್ಕಳ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕಾದ ನೀವು ಕಟ್ಟಡ ಕಾಮಗಾರಿಯಿಂದ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ನಮಗೆ ತಿಳಿಸಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಕ್ಕಳ ಕ್ಷೇಮಪಾಲನಾ ಅಧ್ಯಾಪಕರೊಬ್ಬರು ನೀವು ಬಂದು ಒಂದು ಸಲ ನೋಡಿ ಮಕ್ಕಳಿಗೆ ಉಸಿರಾಟದ ತೊಂದರೆ ಉಂಟಾಗುತ್ತಿದೆ ಎಂದಾಗ ಮತ್ತಷ್ಟು ಗರಂ ಆದ ಶಾಸಕರು ನಿಮಗೆ ಈಗ ಜ್ಞಾನೋದಯ ಆಯಿತಾ. ನೀವು ಬಂದು ಸಮಸ್ಯೆ ಬಗ್ಗೆ ಹೇಳಬಹುದಿತ್ತಲ್ವಾ ಯಾಕೆ ಹೇಳಿಲ್ಲ. ನಿಮಗೆ ಜವಾಬ್ದಾರಿ ಇಲ್ವಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

32 ಜೀವ ಕಾಪಾಡುವ ಕಾಮಗಾರಿ:

ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಡಯಾಲಿಸಿಸ್ ಕೇಂದ್ರ 32 ಬಡ ಜೀವಗಳನ್ನು ಕಾಪಾಡುತ್ತದೆ. ನಿಮಗೆ ತೊಂದರೆಯಾಗಲಿ ಎಂದು ಕಟ್ಟುವ ಕಟ್ಟಡ ಅಲ್ಲ. ಯಾರಿಂದಲೋ ಕಾಡಿಬೇಡಿ ಹಣ ತಂದು ಇಲ್ಲಿ ಕಟ್ಟಡ ನಿರ್ಮಿಸುತ್ತಿದ್ದೇವೆ. ತೊಂದರೆಯಾದರೆ ಕನಿಷ್ಟ ನನ್ನ ಗಮನಕ್ಕೆ ತರುತ್ತಿದ್ದರೆ, ಅದಕ್ಕೆ ವ್ಯವಸ್ಥೆ ಮಾಡುತ್ತಿದ್ದೆ. ಈಗಲೂ ವಿದ್ಯಾರ್ಥಿಗಳಾದ ನೀವು 32 ಜನ ಸತ್ತರೆ ಸಾಯಲಿ ಕೆಲಸ ನಿಲ್ಲಿಸಿ ಅಂತಾ ಹೇಳಿದರೆ ಈಗಲೇ ಕಾಮಗಾರಿ ನಿಲ್ಲಿಸುತ್ತೇನೆ ಎಂದು ಹೇಳಿದರು. ತಕ್ಷಣ ವಿದ್ಯಾರ್ಥಿನಿಯರಿಂದ ಬೇಡ ಬೇಡ ಎಂಬ ಸ್ಪಷ್ಟ ಮಾತು ಕೇಳಿಬಂತು. 

ಕಳೆದ 12 ವರ್ಷಗಳಿಂದ ಈ ಜೈಲಿನಲ್ಲಿ ನೀವು ಪಾಠ ಕೇಳುತ್ತಿದ್ದೀರಿ. ಈಗ ಇಲ್ಲಿ ಬಂದು ಭಾಷಣ ಮಾಡಿ ಹೋದವರು ಕೇವಲ ಭಾಷಣ ಮಾಡಿದ್ದು ಬಿಟ್ಟರೆ ನಿಮ್ಮ ಕಾಲೇಜಿನ ಕಟ್ಟಡಕ್ಕೆ ಒಂದು ರೂಪಾಯಿ ತಂದುಕೊಟ್ಟಿದ್ದಾರಾ. ನಾನು ಶಾಸಕನಾದ ತಂದ ಅನುದಾನ ರೂ.7 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಬಹುತೇಕ ಕಾಮಗಾರಿ ಮುಗಿದಿದೆ. ಮುಂದಿನ ಶೈಕ್ಷಣಿಕ ಆರಂಭ ನೂತನ ಕಟ್ಟಡದಲ್ಲಿಯೇ ಆಗುತ್ತದೆ. ಹಾಗಾಗಿ ತಕ್ಷಣ ತರಗತಿಗಳಿಗೆ ಹೋಗಿ. ಧೂಳು ಬರದಂತೆ ರಾತ್ರಿವೇಳೆ ಕೆಲಸ ಮಾಡಿಸುತ್ತೇನೆ. ತರಗತಿಗಳನ್ನು ಸ್ವಚ್ಛ ಮಾಡಿಕೊಡುತ್ತಾರೆ ಎಂದು ಹೇಳಿದರು. ರಸ್ತೆ ಮೇಲೆ ಪ್ರತಿಭಟನೆ ಆರಂಭಿಸಿದ್ದ ವಿದ್ಯಾರ್ಥಿನಿಯರು ಶಾಸಕರ ಮಾತಿಗೆ ಸ್ಪಂಧಿಸಿ ಪ್ರತಿಭಟನೆ ವಾಪಾಸುಪಡೆದರು. 

ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯರಾದ ಅರ್ಚನಾ ಹಾಗೂ ಚೈತನ್ಯಾ ಮಾತನಾಡಿದರು.  

ಈ ಸಂದರ್ಭ ತಹಶೀಲ್ದಾರ್ ಎಚ್.ಬಿ.ಕೂಡಲಗಿ, ಡಿವೈಎಸ್ಪಿ ಪ್ರಮೋದ್ ಕುಮಾರ್ ಮತ್ತಿತರರು ಇದ್ದರು. 

ಸಂಜೀವ ಮಠಂದೂರು ಭೇಟಿ:

ವಿದ್ಯಾರ್ಥಿನಿಯರ ಪ್ರತಿಭಟನೆಗೆ ಶಾಸಕರ ಆಗಮನಕ್ಕೆ ಮೊದಲು ಆಗಮಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಕ್ಕಳು ಹೀಗೆ ಬೀದಿಪಾಲಾಗಲು ಇಲ್ಲಿನ ಜನಪ್ರತಿನಿಧಿ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಕಾರಣ. ಈ ಸಮಸ್ಯೆ ಪರಿಹಾರ ಕಾಣದಿದ್ದರೆ ನಾವೂ ನಿಮ್ಮ ಜತೆಗೆ ಕುಳಿತುಕೊಳ್ಳುವುದಾಗಿ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article