ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ನಿಂದ ಕಡಲ ಭದ್ರತೆ ಬಗ್ಗೆ ಜಾಗೃತಿ: ಸಂದೀಪ್ ಚಕ್ರವರ್ತಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಬ್ರಹ್ಮಾವರದ ಆಶ್ರಯ ಹೋಟೆಲ್ನ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
25 ದಿನಗಳ ಸೈಕ್ಲೋಥಾನ್ನಲ್ಲಿ ಒಟ್ಟು 130 ಸೈಕ್ಲಿಸ್ಟ್ಗಳು ಭಾಗವಹಿಸಿದ್ದು ಇದರಲ್ಲಿ 65 ಜನ ಮಹಿಳೆಯರು ಭಾಗವಹಿಸಿ ಕರಾವಳಿ ತೀರಗಳ ರಕ್ಷಣೆಯ ಜೊತೆಗೆ ಮಹಿಳಾ ಸಶಕ್ತೀಕರಣದ ಸಂದೇಶವನ್ನು ನೀಡುತ್ತಿದ್ದಾರೆ. ಮುಖ್ಯವಾಗಿ ದೇಶದ ಕರಾವಳಿ ತೀರದ ಜನರ ಜೊತೆ ಬೆರೆತು ಅವರ ಆಚಾರ ವಿಚಾರಗಳನ್ನು ಅರಿಯುವ ಜೊತೆಗೆ ಅವರಿಗೆ ಕಡಲ ಭದ್ರತೆಯ ಬಗ್ಗೆ ಮಾಹಿತಿ ನೀಡಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಇದುವರೆಗೆ ಭೇಟಿ ನೀಡಿದ ಕಡೆಗಳಲ್ಲಿ ಜನರಿಂದ ಅತ್ಯುತ್ತಮ ಸ್ಪಂದನೆ ದೊರೆತಿದ್ದು ಜಾಗೃತಿ ಕಾರ್ಯವು ಯಶಸ್ಸನ್ನು ಕಾಣುತ್ತಿದೆ. ಕಾರ್ಯಕ್ರಮವು ಕೇರಳದ ಕೊಚ್ಚಿಯಲ್ಲಿ ಸಂಪನ್ನವಾಗಲಿದೆ ಎಂದರು.
ರ್ಯಾಲಿಯು ಇಂದು ಬೆಳಗ್ಗೆ ತ್ರಾಸಿ ಪ್ರವೇಶಿಸಿದ್ದು, ಸ್ಥಳೀಯ ಸಂಪ್ರದಾಯದೊಂದಿಗೆ ಸ್ವಾಗತಿಸಲಾಯಿತು. ಅಲ್ಲಿನ ವಿದ್ಯಾರ್ಥಿ ಹಾಗೂ ಸಮುದಾಯದ ಜನರೊಂದಿಗೆ ಸಂವಾದ ನಡೆಸಿ, ಕುಂದಾಪುರ ಮೂಲಕ ಬ್ರಹ್ಮಾವರ ತಲುಪಿತು. ಆ ಬಳಿಕ ಉಡುಪಿ ಮಾರ್ಗವಾಗಿ ಕಾಪುವಿನ ಸರಕಾರಿ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ ನಡೆಸಿ ಹೆಜಮಾಡಿ ಮೂಲಕ ಮಂಗಳೂರಿಗೆ ತಲುಪಿತು.
ಕಾರ್ಯಕ್ರಮದಲ್ಲಿ ಸಿಐಎಸ್ಎಫ್ ಸಹಾಯಕ ಕಮಾಂಡೆಂಟ್ ದುರ್ಗೇಶ್ ಕಲಾಲ್, ಸಿಎಂಓ ಭುವನೇಶ್ ಜಾಧವ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಷನ್ ಶೆಟ್ಟಿ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿಜು ನಾಯ್ಕ, ಉಪಾಧ್ಯಕ್ಷ ಸುದೇಶ್ ಹೆಗ್ಡೆ, ಕಾರ್ಯದರ್ಶಿ ಗ್ರೆಗೋರಿ ಡಿಸೋಜ, ಉದ್ಯಮಿ ರಾಜಾರಾಮ್ ಶೆಟ್ಟಿ ಉಪಸ್ಥಿತರಿದ್ದರು.
ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.