ಸಮಸ್ಯೆಗಳಿಗೆ ಶೀಘ್ರ ಪರಿಹಾರ, ನಾಯಿಗಳಿಗೆ ಶೆಡ್ ನಿರ್ಮಾಣ: ಜಿಲ್ಲಾಧಿಕಾರಿ
ಈ ಸಭೆಯಲ್ಲಿ ಉಳ್ಳಾಲ ಬೈಲ್, ಸುಭಾಷ್ ನಗರ, ಚೆಂಬುಗುಡ್ಡೆ, ಕೃಷ್ಣ ನಗರ ಮುಂತಾದ ಪ್ರದೇಶಗಳಲ್ಲಿ ಚರಂಡಿ ಸಮಸ್ಯೆ ಯಿಂದ ಆಗುವ ತೊಂದರೆ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಯ ಗಮನಸೆಳೆದರು.
ಇತ್ತೀಚೆಗೆ ನಿರ್ಮಾಣ ಆಗಿರುವ ಸ್ಮಶಾನದಲ್ಲಿ ಮೂರು ಲಕ್ಷ ಮೌಲ್ಯದ ಕಬ್ಬಿಣ ಕಳುವಾಗಿದೆ. ಇದಕ್ಕೆ ಹೊಣೆ ಯಾರು, ಜನನ ಮರಣ ಪ್ರಮಾಣ ಪತ್ರ ದಾಖಲೆ ಇಂಟರ್ ನೆಟ್ ನಲ್ಲಿ ಸಿಗುವ ವ್ಯವಸ್ಥೆ ನಮ್ಮ ರಾಜ್ಯದಲ್ಲೂ ಆಗಬೇಕು ಎಂಬ ಆಗ್ರಹ ವ್ಯಕ್ತವಾಯಿತು.
ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಮಾತನಾಡಿ, ಮೀನು ಗಾರ ಮಾಡುವ ಜಾಗದಲ್ಲಿ ಬೀದಿ ನಾಯಿಗಳ ಕಾಟ ಇದೆ. ಇದಕ್ಕೆ ಪರಿಹಾರ ಯಾಕಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ನಾಯಿಗಳಿಗೆ ಶೆಡ್ ನಿರ್ಮಾಣ ಮಾಡಲು ಸರ್ಕಾರದ ಆದೇಶ ಇದೆ. ನಾಯಿಗಳಿಂದ ತುಂಬಾ ತೊಂದರೆಯಾಗುತ್ತಿದೆ. ಈ ಕಾರಣಕ್ಕಾಗಿ ಶೆಡ್ ನಿರ್ಮಾಣ ಮಾಡಲಾಗುವುದು.ದಾರಿಯಲ್ಲಿ ಯಾರೂ ಕೂಡ ನಾಯಿಗಳಿಗೆ ಆಹಾರ ಹಾಕಬಾರದು ಎಂದು ಸೂಚಿಸಿದರು.
ಅಕ್ಕರೆ ಕೆರೆ ಯಲ್ಲಿ ಮಳೆ ನೀರು ಮನೆಗೆ ಬರುತ್ತದೆ, ಇದಕ್ಕೆ ಪರಿಹಾರ ಆಗುತ್ತಿಲ್ಲ. ಇಲ್ಲಿಗೆ ಚರಂಡಿ ವ್ಯವಸ್ಥೆ ಮಾಡಿ ಪರಿಹಾರ ಒದಗಿಸಿ ಎಂದು ಮಹಿಳೆಯೊಬ್ಬರು ತನ್ನ ಅಳಲು ತೋಡಿಕೊಂಡರು.
ಕುಡಿಯುವ ನೀರು, ತೆರಿಗೆ ಬಾಕಿ ಉಳಿಯುತ್ತದೆ, ಸುಭಾಷ್ ನಗರ ವಾರ್ಡ್‌ನಲ್ಲಿ ಚರಂಡಿ ಇಲ್ಲದೇ ತುಂಬಾ ಮನೆಗೆ ಹಾನಿ ಆಗುತ್ತದೆ. ಕೈಕೋದಲ್ಲಿ ಅಂಗನವಾಡಿ ನಿರ್ಮಾಣ ಬೇಡಿಕೆ ಇಟ್ಟು ಅರ್ಜಿ ಹಾಕಿ ಮೂರು ವರ್ಷ ಆಗಿದೆ. ಈ ವರೆಗೆ ಅಂಗನವಾಡಿ ಆಗಿಲ್ಲ. ಈ ವ್ಯವಸ್ಥೆ ಶೀಘ್ರ ಆಗಬೇಕು ಎಂದು ಮಾಜಿ ಕೌನ್ಸಿಲರ್ ಬಶೀರ್ ಮನವಿ ಮಾಡಿದರು.
ಉಳಿಯದಲ್ಲಿ ಜಲಸಿರಿ ಯೋಜನೆ ಅಡಿ ಪೈಪ್‌ಲೈನ್ ಕಾಮಗಾರಿ ಕೆಲವು ಮನೆಗಳಿಗೆ ಆಗಿಲ್ಲ. ಇದರಿಂದ ಬಹಳಷ್ಟು ಕುಟುಂಬಗಳಿಗೆ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಮಾಜಿ ಕೌನ್ಸಿಲರ್ ವೀಣಾ ಜಿಲ್ಲಾಧಿಕಾರಿ ಅವರ ಗಮನ ಸೆಳೆದರು.
ಜಲಸಿರಿ ಯೋಜನೆ ಅಡಿ ಆಗುತ್ತಿರುವ ಕುಡಿಯುವ ನೀರಿನ ಕಾಮಗಾರಿಯಿಂದ ರಸ್ತೆ ಅಗೆದು ಹಾಕಿದ್ದಾರೆ, ಕೇಬಲ್ ಕಟ್ ಮಾಡಿ ಹೋಗಿದ್ದಾರೆ. ಈ ಬಗ್ಗೆ ಕ್ರಮ ಆಗಬೇಕು ಎಂದು ಸ್ಥಳೀಯ ನಿಝಾಮ್ ವಿನಂತಿಸಿದರು.
ಬಡವರು ತೆರಿಗೆಗಳನ್ನು ಬೇಗ ಪಾವತಿ ಮಾಡುತ್ತಾರೆ. ಬಲಾಢ್ಯರು ಪಾವತಿ ಮಾಡುವುದಿಲ್ಲ. ಈ ಬಗ್ಗೆ ಕ್ರಮ ಆಗಬೇಕು. ಜೋರು ಮಳೆ ಬಂದರೆ ಹಲವು ಮನೆಗಳಿಗೆ ಹಾನಿ ಆಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ ಕಾಲುವೆ ಸಮಸ್ಯೆ ಇತ್ಯರ್ಥ ಆಗಬೇಕು. ಮಾಜಿ ಉಪಾಧ್ಯಕ್ಷ ಅಯ್ಯೂಬ್ ಜಿಲ್ಲಾಧಿಕಾರಿಯ ಗಮನ ಸೆಳೆದರು.
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಈ ಬಗ್ಗೆ ಮುಂದಿನ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಹಿಳೆಯರೇ ತುಂಬಿದ್ದರು:
ನಗರಸಭೆಯಲ್ಲಿ 31 ವಾರ್ಡ್‌ಗಳ ಪೈಕಿ ಕೆಲವು ವಾರ್ಡ್‌ಗಳ ಬೆರಳೆಣಿಕೆಯಷ್ಟು ಮಾಜಿ ಕೌನ್ಸಿಲರ್‌ಗಳು ಸಭೆಯಲ್ಲಿ ಇದ್ದರು. ಜಾಸ್ತಿ ಆಗಿ ಮಹಿಳೆಯರೇ ಈ ಸಭೆಯಲ್ಲಿ ಭಾಗವಹಿಸಿ ವಿವಿಧ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರ ಮುಂದಿಟ್ಟರು.
ಪೌರಾಯುಕ್ತ ಸಂತೋಷ್, ಲೆಕ್ಕಾಧಿಕಾರಿ ವಾಸುದೇವ ಉಪಸ್ಥಿತರಿದ್ದರು.