ಬಜೆಟ್: ಮಾ.9 ರಂದು ಶಾಸಕರಿಗೆ ಕಾರ್ಯಾಗಾರ
ಮಂಗಳೂರು: ಬಜೆಟ್ ಅಧಿವೇಶನದ ಮಹತ್ವ, ರಾಜಸ್ವ ಸಂಗ್ರಹ, ಆರ್ಥಿಕ ವ್ಯವಸ್ಥೆಯ ವಿಚಾರ, ಅನುದಾನಗಳ ವರ್ಗೀಕರಣ ಮತ್ತು ಹಂಚಿಕೆ, ಬಳಕೆ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಶಾಸಕರಿಗೆ ಕಾರ್ಯಾಗಾರ ಮಾ. 9ರಂದು ಸಂಜೆ 4 ಗಂಟೆಗೆ ಲಲಿತ್ ಅಶೋಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಾಗಾರವನ್ನು ಮುಖ್ಯಮತ್ರಿ ಸಿದ್ಧರಾಮಯ್ಯ ನಡೆಸಿಕೊಡಲಿದ್ದಾರೆ ಎಂದರು.
ದೇಶದಲ್ಲಿ ೧೭ನೇ ಬಾರಿಗೆ ಬಜೆಟ್ ಮಂಡಿಸಿ, ಆರ್ಥಿಕ ವ್ಯವಸ್ಥೆ ನಿರ್ವಹಣೆ ಬಗ್ಗೆ ಸಂಪನ್ಮೂಲ ಹಾಗೂ ಜ್ಞಾನ ಇರುವ ವ್ಯಕ್ತಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾರೂ ಸಿಗಲಾರರು. ಅವರೇ ಮಾಹಿತಿ ನೀಡಲಿದ್ದು, ಶಾಸಕರು ಈ ಬಗ್ಗೆ ಯಾವುದೇ ರೀತಿಯ ಸಂಶಯ, ಅನುಮಾನಗಳನ್ನು ಈ ಕಾರ್ಯಾಗಾರದಲ್ಲಿ ಪರಿಹರಿಸಿಕೊಳ್ಳಬಹುದು. ಬಜೆಟ್‌ನ ಭಾಷಣದ ಚರ್ಚೆ ಅಲ್ಲ. ಇಂದಿನ ಶಾಸಕರು ಮುಂದೆ ಹಣಕಾಸು ಸಚಿವರೂ ಆಗಬಹುದು, ಹಾಗಾಗಿ ಅವರೆಲ್ಲರಿಗೂ ಹಣಕಾಸಿನ ನಿರ್ವಹಣೆ ಮತ್ತು ಹಂಚಿಕೆಯ ಕುರಿತಂತೆ ಮಾಹಿತಿಯನ್ನು ಒದಗಿಸುವ ಉದ್ದೇಶ ಈ ಕಾರ್ಯಾಗಾರದ್ದಾಗಿದೆ. ಇಂತಹ ಕಾರ್ಯಾಗಾರ ಇದೇ ಮೊದಲ ಬಾರಿಗೆ ನಡೆಸಲಾಗುತ್ತಿದೆ. ಎಲ್ಲಾ ಶಾಸಕರು ತಪ್ಪದೇ ಹಾಜರಿರುವಂತೆ ತಿಳಿಸಲಾಗಿದೆ ಎಂದವರು ಹೇಳಿದರು.
ಕೆಲ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂಬ ಆರೋಪಕ್ಕೆ ಈ ಕಾರ್ಯಾಗಾರದಿಂದ ಉತ್ತರ ಸಿಗಲಿದೆಯೇ ಎಂಬ ಪ್ರಶ್ನೆಗೆ, ಅದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಆದರೆ ಅಲ್ಲಲ್ಲಿ ಶಾಸಕರು ಉದ್ಘಾಟನೆ, ಶಂಕುಸ್ಥಾಪನೆ ಮಾಡುವುದನ್ನು ಮಾಧ್ಯಮದಲ್ಲಿ ಗಮನಿಸುತ್ತಿರುತ್ತೇನೆ. ಅದು ಯಾವ ಅನುದಾನದಲ್ಲಿ ಆಗುತ್ತಿದೆ ಎಂಬುದು ಗೊತ್ತಿಲ್ಲ. ಪ್ರತಿಯೊಬ್ಬರ ಅಭಿಪ್ರಾಯ ಭಿನ್ನವಾಗಿದ್ದು, ಸ್ಪೀಕರ್ ಆಗಿ ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಸಾಲ ಮಾಡಿ ಬಜೆಟ್ ಮಂಡಿಸಲಾಗಿದೆ ಎಂಬ ಟೀಕೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯ. ಗ್ರಾ.ಪಂನಿಂದ ಹಿಡಿದು ಲೋಕಸಭೆ ತನಕವೂ ಟೀಕೆಗಳು ಸಹಜ. ಒಂದು ತಿಂಗಳ ಅಧಿವೇಶನ ಇದೆ. ಅಲ್ಲಿ ಚರ್ಚೆಯಾಗುತ್ತದೆ ಎಂದು ಹೇಳಿದರು.