ಬಾಳಿಗಾ ಕೊಲೆಗಡುಕರನ್ನು ಬಿಜೆಪಿ, ಆರ್ ಎಸ್ ಎಸ್ ನಾಯಕರು ರಕ್ಷಿಸುತ್ತಿದ್ದಾರೆ: ಬಿ.ಕೆ. ಹರಿಪ್ರಸಾದ್ ಆರೋಪ

ಬಾಳಿಗಾ ಕೊಲೆಗಡುಕರನ್ನು ಬಿಜೆಪಿ, ಆರ್ ಎಸ್ ಎಸ್ ನಾಯಕರು ರಕ್ಷಿಸುತ್ತಿದ್ದಾರೆ: ಬಿ.ಕೆ. ಹರಿಪ್ರಸಾದ್ ಆರೋಪ


ಮಂಗಳೂರು: ಮೆರವಣಿಗೆಯ ತರುವಾಯ ವಿನಾಯಕ ಬಾಳಿಗಾ ಮನೆಯ ಬಳಿ ನಡೆದ ಬಹಿರಂಗ‌ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ "ನನ್ನ ಜೀವನದಲ್ಲಿ ಇಂತಹ ಒಂದು ಅಪರೂಪದ ದಿನ ಬರುತ್ತದೆ ಎಂದು ನಾನು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ಒರ್ವ ಬಿಜೆಪಿ ಕಾರ್ಯಕರ್ತನ ಸಾವಿಗೆ ನ್ಯಾಯ ಕೇಳಿ ಹುಟ್ಟಾ ಕಾಂಗ್ರೆಸ್ಸಿಗನಾದ ನಾನು ಬೀದಿಗೆ ಬಂದಿದ್ದೇನೆ. ಹಿಂದೂಗಳ ಮೇಲೆ ದೌರ್ಜನ್ಯವಾದಾಗ ಬಿ.ಕೆ. ಹರಿಪ್ರಸಾದ್ ಯಾಕೆ ಮಾತಾಡಲ್ಲ, ಹಿಂದುತ್ವವಾದಿಗಳ ಕೊಲೆಯಾದಾಗ ಬಿ.ಕೆ. ಹರಿಪ್ರಸಾದ್ ಯಾಕೆ ಮಾತನಾಡಲ್ಲ ಎಂದು ಆರ್ಎಸ್ಎಸ್ ನಾಯಕರು, ಬಿಜೆಪಿ ನಾಯಕರು ನನ್ನನ್ನು ಯಾವಾಗಲೂ ಪ್ರಶ್ನಿಸುತ್ತಿರುತ್ತಾರೆ. ಇಂದು ಮಂಗಳೂರಿನ ನೆಲದಲ್ಲಿ ನಿಂತು ಹಿಂದುತ್ವದ ಪ್ರಾಮಾಣಿಕ ಕಾರ್ಯಕರ್ತನ, ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತನ ಕೊಲೆಗೆ ನ್ಯಾಯ ಕೇಳುತ್ತಿದ್ದೇನೆ. ಆರ್ಎಸ್ಎಸ್, ಬಿಜೆಪಿಯವರು ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದರು. 


ಅವರು ಇಂದು  ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯಾಗಿ 10 ವರುಷ ಸಂದ ನೆನಪಿನಲ್ಲಿ ವೆಂಕಟರಮಣ ದೇವಳದಿಂದ ಬಾಳಿಗಾನೆಯವರೆಗೆ ನಡೆದ ಮೆರವಣೆಗೆ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 


ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗರ ಪರಿಚಯ ನನಗಿಲ್ಲ. ವಿನಾಯಕ ಬಾಳಿಗ ಮಾಹಿತಿ ಹಕ್ಕು ಕಾರ್ಯಕರ್ತ ರಾಗಿದ್ದರು. ದೇವಸ್ಥಾನದ ಹಣದಲ್ಲಿ ಆರ್ಎಸ್ಎಸ್, ನಮೋ ಬ್ರಿಗೇಡ್ ನಾಯಕರು ನಡೆಸಿದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕಾಗಿ ಅವರು ಅಮಾನುಷವಾಗಿ ಕೊಲೆ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರಲು ನಮೋ ಬ್ರಿಗೇಡ್ ಕಾರಣ ಎಂದು ನಮೋ ಬ್ರಿಗೇಡ್ ಹಲವು ಬಾರಿ ಹೇಳಿಕೊಂಡಿತ್ತು. 2016 ಮಾರ್ಚ್ 21 ರಂದು ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತ ಮತ್ತು ಪ್ರಾಮಾಣಿಕ ಹಿಂದುತ್ವವಾದಿ ವಿನಾಯಕ ಬಾಳಿಗ ಅವರನ್ನು ಅವರ ಮನೆಯ ಮುಂದೆ ಕೊಚ್ಚಿ ಕೊಲೆ ಮಾಡಿದ ಆರೋಪಿಗಳ ಪೈಕಿ ಮೊದಲನೇ ಆರೋಪಿ ನಮೋ ಬ್ರಿಗೇಡ್ ಅಧ್ಯಕ್ಷ ಮಂಗಲ್ಪಾಡಿ ನರೇಶ್ ಶೆಣೈ! ಕೋರ್ಟ್ನಲ್ಲಿ ಈಗಲೂ ಆತ ಕಟಕಟೆಯಲ್ಲಿ ನಿಂತಿರುತ್ತಾನೆ! ಇಲ್ಲಿನ ಬಹುತೇಕ ಬಿಜೆಪಿ ಎಂಎಲ್ಎಗಳು ನರೇಶ್ ಶೆಣೈಯ ಮುಲಾಜಿನಲ್ಲಿದ್ದಾರೆ. ಎಲೆಕ್ಷನ್ ಟೈಮ್ ನಲ್ಲಿ ಹಣ ಹಂಚುವುದು, ಮೀಡಿಯಾ ಮ್ಯಾನೇಜ್ ಮಾಡುವುದು ನರೇಶ್ ಶೆಣೈ ಕೆಲಸ. ಇವತ್ತು ಇಡೀ ಮಂಗಳೂರಿನ ಎಲ್ಲಾ ಜಾತಿ, ಧರ್ಮದವರು ಬಾಳಿಗ ಹತ್ಯೆಗೆ ನ್ಯಾಯ ಕೇಳುತ್ತಿದ್ದರೆ. ಬಿಜೆಪಿಯ ಶಾಸಕರು, ಸಂಸದರು ಇದಕ್ಕೆ ಉತ್ತರ ಕೊಡಬೇಕು.


ಆರ್ಎಸ್ಎಸ್ ನಾಯಕರೇ, ಬಿಜೆಪಿ ಶಾಸಕರೇ, ಸಂಸದರೇ, ವಿನಾಯಕ ಬಾಳಿಗ ಮಾಡಿದ ಅಪರಾಧ ಏನು? ವಿನಾಯಕ ಬಾಳಿಗಾ ಲವ್ ಜಿಹಾದ್ ಮಾಡಿದ್ರಾ? ವಿನಾಯಕ ಬಾಳಿಗಾ ಗೋ ಸಾಗಾಟ ಮಾಡಿದ್ರಾ? ಯಾವ ಹಿಂದೂ ವಿರೋಧಿ ಕೆಲಸ ಮಾಡಿದ್ರು ಅಂತ ನೀವು ವಿನಾಯಕ ಬಾಳಿಗರನ್ನು ಕೊಲೆ ಮಾಡಿದ್ರಿ? ನಮಗೆ ಉತ್ತರ ಬೇಕು  ಎಂದು ಹೇಳಿದರು.


ತಾನು ನಂಬಿರುವ ವೆಂಕಟರಮಣ ದೇವಸ್ಥಾನದಲ್ಲಿ ದೇವರ ದುಡ್ಡನ್ನು ತಿಂದವರ ವಿರುದ್ಧ ಪ್ರತಿಭಟಿಸಿದ್ದು ವಿನಾಯಕ ಬಾಳಿಗ ಮಾಡಿದ ಅಪರಾಧವೆ?. ದೇವಸ್ಥಾನದ ಹಣ ಮಸೀದಿಗೆ ಹೋಗುತ್ತೆ, ದೇವಸ್ಥಾನದ ಹಣ ಮುಸ್ಲೀಮರಿಗೆ ಹೋಗುತ್ತೆ ಎಂದು ಆರ್ಎಸ್ಎಸ್ ನಾಯಕರು ಬೊಬ್ಬೆ ಹೊಡೀತಾರೆ. ದೇವಸ್ಥಾನದ ದುಡ್ಡು ಎಲ್ಲಿ ಹೋಗುತ್ತೆ ಅಂತ ವಿನಾಯಕ ಬಾಳಿಗ ತೋರಿಸಿಕೊಟ್ಟಿದ್ದರು. ವೆಂಕಟರಮಣ ದೇವಸ್ಥಾನದ ದುಡ್ಡು ನಮೋ ಬ್ರಿಗೇಡ್ ಅಧ್ಯಕ್ಷನ ಮನೆಗೆ ಹೋಗುತ್ತಿತ್ತು. ಅದನ್ನು ಪ್ರಶ್ನೆ ಮಾಡಿದ್ದಕ್ಕಾಗಿಯೇ ವಿನಾಯಕ ಬಾಳಿಗನ ಕೊಲೆಯಾಯಿತು ಎಂದು ಪೊಲೀಸರು ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ ಶೀಟ್ ಹೇಳುತ್ತದೆ. ದೇವಸ್ಥಾನದ ಕಾಣಿಕೆ  ಹುಂಡಿ ಹಣದ  ಬಗ್ಗೆ ಮಾತನಾಡುವ ಆರ್ಎಸ್ಎಸ್, ಬಿಜೆಪಿ ನಾಯಕರು ವೆಂಕಟರಮಣ ದೇವರ ಕಾಣಿಕೆ ಡಬ್ಬದ ಬಗ್ಗೆಯೂ ಮಾತನಾಡಬೇಕಲ್ವಾ?, ಕಾಣಿಕೆ ಡಬ್ಬ ಹಣವನ್ನು ದೇವರಿಗೇ ಉಳಿಸಲು ಹೋರಾಡಿ ಪ್ರಾಣತ್ಯಾಗ ಮಾಡಿದ ವಿನಾಯಕ ಬಾಳಿಗ ಪರವಾಗಿ ನಿಲ್ಲಬೇಕಲ್ವಾ ಎಂದು ಬಿಜೆಪಿ‌, ಆರ್ ಎಸ್ ಎಸ್ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.


ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ತನ್ನ ಬೂತ್ ಮಟ್ಟದ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯ ಸಂದರ್ಭದಲ್ಲಿ ಬಿಜೆಪಿ ಬಾಯಿ ಮುಚ್ಚಿ ಕೂತಿತ್ತು, ಪ್ರಾಮಾಣಿಕ ಕಾರ್ಯಕರ್ತನನ್ನು ಭ್ರಷ್ಟಾಚಾರಿ ಎಂದು ಬಿಂಬಿಸಲು, ಆ ಮೂಲಕ ಕೊಲೆಗಡುಕರನ್ನು ರಕ್ಷಿಸಲು ವ್ಯವಸ್ಥಿತ ಪಿತೂರಿ ನಡೆಸಲಾಗಿತ್ತು. ಆ ಸಂದರ್ಭ ಜಿಲ್ಲೆಯ ಜನಪರ ಸಂಘಟನೆಗಳು ಒಂದಾಗಿ ಬೀದಿಗೆ ಇಳಿಯದಿರುತ್ತಿದ್ದರೆ ಪ್ರಕರಣ ಮುಚ್ಚಿ ಹೋಗುತ್ತಿತ್ತು. ಬಿಜೆಪಿ, ಸಂಃಘಪರಿವಾರದ ಕಾರ್ಯಕರ್ತನ ಕೊಲೆಗೆ ನ್ಯಾಯ ಕೇಳಿ ಎಡಪಂಥೀಯರು ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದರೆ, ಬಿಜೆಪಿ ಶಾಸಕರುಗಳು ಕೊಲೆಗಾರರ ರಕ್ಷಣಗೆ ಪಿತೂರಿ ಮಾಡುತ್ತಿದ್ದರು, ಇದು ಬಿಜೆಪಿಯ ನಿಜ ಸ್ವರೂಪ ಎಂದು ಆಪಾದಿಸಿದರು.


ಹಿರಿಯರಾದ ಪ್ರೋ ನರೇಂದ್ರ ನಾಯಕ್ ಮೆರವಣೆಗೆ ಚಾಲನೆ ನೀಡಿ ಮಾತನಾಡಿದರು. ಮನೋವೈದ್ಯರಾದ ಡಾ ಪಿ.ವಿ ಭಂಡಾರಿ, ಅಮೃತ ಶೆಣೈ, ಬಿ ಶೇಖರ್, ಡಿಎಸ್ಎಸ್ ನ ಹಿರಿಯ ಮುಖಂಡರಾದ ಎಂ.ದೇವದಾಸ್, ಎಂ ಜಿ ಹೆಗಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 


ಈ ವೇಳೆ ವಿನಾಯಕ ಬಾಳಿಗಾರ ಸಹೋದರಿಯರಾದ ಅನುರಾಧ ಬಾಳಿಗ, ಹರ್ಷ ಬಾಳಿಗ , ಮಾಜಿ ಉಪಮೇಯರ್ ನಮಿತಾ ಡಿ ರಾವ್ , ಕಾರ್ಮಿಕ ಮುಖಂಡರಾದ ಚಿತ್ತರಂಜನ್ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ವಿ ಕುಕ್ಯಾನ್, ಕರುಣಾಕರ್, ಡಿವೈಎಫ್ಐ ಮುಖಂಡರಾದ ನವೀನ್ ಕೊಂಚಾಡಿ, ತಯ್ಯೂಬ್ ಬೆಂಗರೆ, ನಿತಿನ್ ಕುತ್ತಾರ್, ಮನೋಜ್ ವಾಂಮಜೂರು, ಚರಣ್ ಶೆಟ್ಟಿ ಪಂಜಿಮೊಗರು,  ಡಿಎಸ್ಎಸ್ ಮುಖಂಡರಾದ ರಘು ಎಕ್ಕಾರ್, ಸದಾಶಿವ ಪಡುಬಿದ್ರೆ, ಎಸ್ ಎಲ್ ಪಿಂಟೋ, ಪ್ರಮೀಳಾ ಶಕ್ತಿನಗರ, ಅಸುಂತ  ಡಿಸೋಜ, ಸರೋಜಿನಿ ಬಂಟ್ವಾಳ, ಭಾರತೀ ಬೋಳಾರ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ಶ್ಯಾಮ್ ಸುಂದರ್, ಪ್ರಭಾಕರ್ ಕಾಪಿಕಾಡ್, ಸಮರ್ಥ್ ಭಟ್,  ಮಾಜಿ ಕಾರ್ಪೋರೇಟರ್ ರವೂಫ್ ಬಜಾಲ್, ಪ್ರಕಾಶ್ ಸಾಲ್ಯಾನ್, ಪದ್ಮನಾಭ ಅಮೀನ್, ಬಿ ವಿಶ್ವನಾಥ್, ಪದ್ಮನಾಭ ಪಣಿಕರ್, ದಯಾನಂದ ಶೆಟ್ಟಿ, ಕಾರ್ಕಳ ಪುರಸಭಾ ಮಾಜಿ ಸದಸ್ಯರಾದ ಶುಬೋದ್ ರಾವ್, ಪ್ರದೀಪ್ ಬೆಲಾಡಿ,  ನೀತು ಶರಣ್, ರಾಜೇಶ್ ದೇವಾಡಿಗ, ಆಶಾ ನಾಯಕ್, ಅರ್ಚನ ಆಚಾರ್ಯ, ಕಲಾ ಡಿ ರಾವ್, ವೆಲ್ವಿನ್, ದಿನೇಶ್ ಮೂಳೂರು, ವಾಸುದೇವ ರಾವ್, ಡೆನ್ನಿಸ್ ಡಿಸಿಲ್ವ, ನಝೀರ್ ಬಜಾಲ್, ಶ್ರೀನಿವಾಸ್ ನಂದಗೋಪಾಲ ಮುಂತಾದವರು ಉಪಸ್ಥಿತರಿದ್ದರು.


ಸಭೆಯ ನೇತೃತ್ವವನ್ನು ವಹಿಸಿದ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಂತೋಷ್ ಬಜಾಲ್ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು, ಮಂಜುಳಾ ನಾಯಕ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article