ನಮೋ ನಿವಾಸ ಹಸ್ತಾಂತರ

ನಮೋ ನಿವಾಸ ಹಸ್ತಾಂತರ


ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಳಗಿನ ಸರಿಪಲ್ಲ, ಸರಸ್ವತಿ ಫ್ರೆಂಡ್ಸ್ ಕ್ಲಬ್ ಬಳಿ, ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವ ಹಾಗೂ ಇತರೆ ದಾನಿಗಳ ಸಹಕಾರದೊಂದಿಗೆ ನಿರ್ಮಾಣಗೊಂಡ "ನಮೋ ನಿವಾಸ”ದ ಹಸ್ತಾಂತರ ಕಾರ್ಯಕ್ರಮವು ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್. ಅವರು ಮನೋಜ್ ದಂಪತಿಗಳಿಗೆ ಕೀಲಿ ಕೈ ಹಸ್ತಾಂತರಿಸಿ, ಸಂಘದ ಶತಾಬ್ದಿ ಹಿನ್ನಲೆಯಲ್ಲಿ ಸೇವಾ ಚಟುವಟಿಕೆ ಭಾಗವಾಗಿ ಈ ನಮೋ ನಿವಾಸ ನಿರ್ಮಾಣಗೊಂಡಿದೆ. ಶಾಸಕ ಕಾಮತ್ ಅವರ ವಿಶೇಷ ಮುತುವರ್ಜಿ ಸಹಿತ ಎಲ್ಲರ ನೆರವಿನೊಂದಿಗೆ ಬಹಳ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿರುವ ಈ ಮನೆಯು ಮುಂದಿನ ದಿನಗಳಲ್ಲಿ ಸೇವಾ, ಸಂಸ್ಕಾರ ಹಾಗೂ ರಾಷ್ಟ್ರೀಯ ವಿಚಾರಧಾರೆಯ ಚಟುವಟಿಕೆಗಳು ನಿರಂತರವಾಗಿ ನಡೆಯುವ ಕೇಂದ್ರವಾಗಲಿ ಎಂದು ಶುಭ ಹಾರೈಸಿದರು. 

ಸಂಘದ ವಿಭಾಗ ಕಾರ್ಯವಾಹ ಹರಿಕೃಷ್ಣರವರು ಮಾತನಾಡಿ, ಶಾಸಕರದ್ದು ಸಮಾಜಕ್ಕೆ ಸಂಪೂರ್ಣ ಸಹಕಾರ ನೀಡಿದ ಕುಟುಂಬ. ನಾನು ಗಮನಿಸಿದಂತೆ ಇದು ಅವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ಎಂಟನೇ ಮನೆ. ಒಬ್ಬ ಸಂಘದ ಸ್ವಯಂಸೇವಕ ಜನಪ್ರತಿನಿಧಿಯಾಗಿ ಅಭಿವೃದ್ಧಿ ಜೊತೆಗೆ ಜನ ಸೇವೆಯಲ್ಲಿ ಹೇಗೆ ನಿರತನಾಗಿರಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಂತಿರುವ ಶಾಸಕರಿಗೆ ಅಭಿನಂದನೆಗಳು. ಸಂಘಕ್ಕೆ ಒಂದೊಂದು ಮನೆಯೂ  ಬಹಳ ಮುಖ್ಯ. ತುರ್ತು ಪರಿಸ್ಥಿತಿಯಲ್ಲಿ ಸಂಘಕ್ಕೆ ಮನೆಗಳೇ ದೊಡ್ಡ ಶಕ್ತಿಯಾಗಿತ್ತು ಎಂದರು.

ಶಾಸಕ ಕಾಮತ್ ಅವರು ಮಾತನಾಡಿ, 2018-19 ರಲ್ಲಿ ಪ್ರಕೃತಿ ವಿಕೋಪದಿಂದಾಗಿ ಈ ಮನೆಯು ಸಂಪೂರ್ಣ ಕುಸಿದಿತ್ತು. ಇಂತಹ ಅವಘಡಗಳಿಗೆ ಮೊದಲು ಸರ್ಕಾರಗಳು ನೀಡುತ್ತಿದ್ದದ್ದು ಕೇವಲ 1 ಲಕ್ಷದ 20 ಸಾವಿರ. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಪರಿಹಾರದ ಮೊತ್ತವನ್ನು 5 ಲಕ್ಷಕ್ಕೆ ಏರಿಸಿದ್ದು ಬಡವರ ಪಾಲಿಗೆ ಐತಿಹಾಸಿಕ ನಿರ್ಧಾರ. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಆ ಮೊತ್ತವನ್ನು 1 ಲಕ್ಷದ 20 ಸಾವಿರಕ್ಕೆ ಇಳಿಸಿರುವುದು ದುರಂತ. ಸರ್ಕಾರದ ಪರಿಹಾರ, ದಾನಿಗಳ ಸಹಕಾರ ಹಾಗೂ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟುರವರು ವಿಶೇಷ ಪ್ರಯತ್ನದಿಂದ ನಿರ್ಮಾಣವಾಗಿರುವ ಈ ನಮೋ ನಿವಾಸದಲ್ಲಿ ಸಂಘದ ಹಿರಿಯರು ಹಚ್ಚಿದ ದೀಪವು ನಂದಾದೀಪವಾಗಿ ಬೆಳಗಲಿ ಎಂದು ಹಾರೈಸಿದರು. 

ಪ್ರಮುಖರಾದ ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ, ರಮೇಶ್ ಹೆಗ್ಡೆ, ರೂಪಶ್ರೀ ಪೂಜಾರಿ, ಅಶ್ವಿತ್ ಕೊಟ್ಟಾರಿ, ಪ್ರವೀಣ್ ನಿಡ್ಡೇಲ್, ಮೋಹನ್ ಪೂಜಾರಿ, ಕಿರಣ್ ರೈ, ರಾಮ್ ಪ್ರಸಾದ್, ವಿಜಯ್ ಭಂಡಾರಿ, ನರೇಶ್ ಸರಿಪಲ್ಲ, ಸುರೇಶ್ ಆಚಾರ್, ಶರಣ್ ಸರಿಪಲ್ಲ, ನಿತ್ಯಾನಂದ, ದೀಪಕ್ ಪೈ, ಅಶೋಕ್ ಉಮಿಕಾನ್, ಈಶ್ವರ್.ಕೆ, ವಿಶ್ವನಾಥ್, ಕಿಶೋರ್, ನಿಕಟ ಪೂರ್ವ ಪಾಲಿಕೆ ಸದಸ್ಯರುಗಳು, ಸ್ಥಳೀಯರು ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article