ಮಂಗಳೂರು ವಿ. ವಿ.: ಗೋವಾ ಮಾದರಿ ‘ಸ್ಕೂಲ್ ಸಿಸ್ಟಮ್’ ಪಠ್ಯಕ್ರಮ
ಮಂಗಳೂರು ವಿವಿ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಈ ಸಂಬಂಧ ವಿವಿಯ ನಿಯೋಗ ಶೀಘ್ರವೇ ಗೋವಾಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಲಿದೆ. ಈಗಾಗಲೇ ಹೊಸ ಪಠ್ಯಕ್ರಮ ರಚನೆಯ ಚಟುವಟಿಕೆಗಳು ಹಿರಿಯ ಡೀನ್‌ಗಳ ಉಸ್ತುವಾರಿಯಲ್ಲಿ ಪ್ರಾರಂಭವಾಗಿವೆ ಎಂದರು.
ಮಂಗಳೂರು ವಿವಿಯಲ್ಲಿ ಕಾಯಂ ಪ್ರಾಧ್ಯಾಪಕರ ಕೊರತೆ ಇದೆ. ಪ್ರಸಕ್ತ ಹೊಸ ನೇಮಕಾತಿ ಆಗುತ್ತಿಲ್ಲ. ಎಲ್ಲ ವಿದ್ಯಾರ್ಥಿಗಳಿಗೆ ಹಿರಿಯ ಪ್ರಾಧ್ಯಾಪಕರ ಬೋಧನೆ ಲಭ್ಯವಾಗಬೇಕು ಎಂಬ ಹಿನ್ನೆಲೆಯಲ್ಲಿ ವಾಣಿಜ್ಯ, ರಸಾಯನ ವಿಜ್ಞಾನ, ಮಾನವಿಕ ವಿಭಾಗ, ಜೀವ ವಿಜ್ಞಾನ ಹೀಗೆ ನಾಲ್ಕು ಮುಖ್ಯ ವಿಭಾಗಗಳನ್ನು ಮಾಡಿ, ಅವುಗಳಿಗೆ ಸಂಬಂಧಿತ ಉಪ ವಿಷಯಗಳನ್ನು ಆಯಾ ವಿಭಾಗಕ್ಕೆ ಜೋಡಿಸಿ ಅದಕ್ಕೆ ಪ್ರತ್ಯೇಕ ಪಠ್ಯಕ್ರಮ ರೂಪಿಸಲಾಗುವುದು ಎಂದರು.
ಮೊದಲ ಮತ್ತು ಎರಡನೇ ಸೆಮಿಸ್ಟರ್‌ನಲ್ಲಿ ನಿರ್ದಿಷ್ಟ ವಿಭಾಗ ವ್ಯಾಪ್ತಿಯ ಎಲ್ಲ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಸಮಗ್ರವಾಗಿ ಬೋಧನೆ ಮಾಡಲಾಗುತ್ತದೆ. ಮೂರನೇ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳು ಆಯ್ದುಕೊಂಡಿರುವ ವಿಷಯಕ್ಕೆ ಸಂಬಂಧಿಸಿದ ವಿಭಾಗಕ್ಕೆ ವರ್ಗಾವಣೆಯಾಗಲಿದೆ. ಮೂರು ಮತ್ತು ನಾಲ್ಕನೇ ಸೆಮಿಸ್ಟರ್ಗಳು ನಿರ್ದಿಷ್ಟ ವಿಷಯದ ಕೇಂದ್ರೀಕೃತ ಅಧ್ಯಯನಕ್ಕೆ ಮೀಸಲಾಗಿರಲಿದೆ ಎಂದರು.
ಪಿಂಚಣಿ ಫಂಡ್..
ಭವಿಷ್ಯದಲ್ಲಿ ನಿವೃತ್ತರಿಗೆ ಪಿಂಚಣಿಯನ್ನು ನಿಯಮಿತವಾಗಿ ಒದಗಿಸುವ ಉದ್ದೇಶದಿಂದ ಪೆನ್‌ಷನ್ ಟ್ರಸ್ಟ್ ಫಂಡ್ (ಪಿಇಎಸ್) ಸ್ಥಾಪಿಸಲಾಗಿದೆ. ಆರಂಭದಲ್ಲಿ 50 ಲಕ್ಷ ರೂ. ಸಂಗ್ರಹಿಸಲಾಗಿದೆ. ಕರ್ನಾಟಕ ನೋಂದಣಿ ಕಾಯ್ದೆ ಅಡಿಯಲ್ಲಿ ನೋಂದಾಯಿಸಿರುವ ಟ್ರಸ್ಟ್‌ಗೆ ಕುಲಪತಿ ಅಧ್ಯಕ್ಷರಾಗಿದ್ದು, 11 ಮಂದಿ ಸದಸ್ಯರು ಇರುತ್ತಾರೆ. ವಿವಿಯಲ್ಲಿ ಹಣ ಕ್ರೋಢೀಕರಣ ಆದಾಗ ಹೆಚ್ಚುವರಿ ಮೊತ್ತವನ್ನು ಈ ಖಾತೆಗೆ ವರ್ಗಾಯಿಸಿ ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಮುಂದೆ ಪಿಂಚಣಿ ಪಾವತಿಗೆ ಅನುಕೂಲವಾಗಲಿದೆ ಎಂದರು.
ಪ್ರಸ್ತುತ ನಿವೃತ್ತರಿಗೆ ಮಾಸಿಕ ಪಿಂಚಣಿ ನೀಡಲು ಸರ್ಕಾರದಿಂದ 1.3 ಕೋಟಿ ರೂ. ಅನುದಾನ ದೊರೆಯುತ್ತದೆ. ಉಳಿದ 1.4 ಕೋಟಿ ರೂ. ಮೊತ್ತವನ್ನು ವಿವಿಯ ಆಂತರಿಕ ಸಂಪನ್ಮೂಲ ನಿಧಿಯಿಂದ ಭರಿಸಬೇಕು. ಭವಿಷ್ಯದಲ್ಲಿ ವಿವಿ ಮೇಲಿನ ಆರ್ಥಿಕ ಹೊರೆ ತಗ್ಗಿಸುವ ಪರಿಕಲ್ಪನೆಯಲ್ಲಿ ರಚಿಸಿರುವ ಟ್ರಸ್ಟ್ ಬಗ್ಗೆ ಸರ್ಕಾರದಿಂದಲೂ ಪ್ರಶಂಸೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.
ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಕುಲಸಚಿವ ಗಣೇಶ್ ಸಂಜೀವ ಇದ್ದರು.