ಆಳ್ವಾಸ್ ‘ಪುನರ್ಜನ್ಮ’ ಕೇಂದ್ರದ 6ನೇ ವಾರ್ಷಿಕೋತ್ಸವ: ಅಮಲು ವ್ಯಸನ ಸಮಾಜದ ಗಂಭೀರ ಪಿಡುಗು: ಡಾ. ಸತೀಶ್ ರಾವ್

ಆಳ್ವಾಸ್ ‘ಪುನರ್ಜನ್ಮ’ ಕೇಂದ್ರದ 6ನೇ ವಾರ್ಷಿಕೋತ್ಸವ: ಅಮಲು ವ್ಯಸನ ಸಮಾಜದ ಗಂಭೀರ ಪಿಡುಗು: ಡಾ. ಸತೀಶ್ ರಾವ್


ಮೂಡುಬಿದಿರೆ: ಅಮಲು ಪದಾರ್ಥಗಳ ವ್ಯಸನವು ಸಾಮಾನ್ಯ ಸಾಮಾಜಿಕ ಪಿಡುಗಾಗಿದ್ದು, ಇದು ಕೇವಲ ದೈಹಿಕ ಸಮಸ್ಯೆಯಷ್ಟೇ ಅಲ್ಲದೆ ಮಾನಸಿಕ ಹಾಗೂ ಸಾಮಾಜಿಕ ಕಾಯಿಲೆಯೂ ಆಗಿದೆ ಎಂದು ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಸತೀಶ್ ರಾವ್ ಹೇಳಿದರು.

ಅವರು ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರದ ಆರನೇ ವರ್ಷದ ವಾರ್ಷಿಕೋತ್ಸವ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಆಳ್ವಾಸ್ ಪುನರ್ಜನ್ಮ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.


ಅಮಲು ಪದಾರ್ಥಗಳ ವ್ಯಸನದಿಂದ ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಹಾಗೂ ಕೌಟುಂಬಿಕ ಸಂಕಷ್ಟಗಳು ಉಂಟಾಗುತ್ತವೆ. ಸಮಾಜ ಆರೋಗ್ಯಕರವಾಗಿರಬೇಕಾದರೆ ಇಂತಹ ದುಶ್ಚಟಗಳು ಇರಬಾರದು. ದುರದೃಷ್ಟವಶಾತ್ ಇಂದಿಗೂ ಸಮಾಜದಲ್ಲಿ ಈ ಸಮಸ್ಯೆ ಮುಂದುವರಿದಿರುವುದು ಆತಂಕಕಾರಿ ಸಂಗತಿ. ಸಾಮಾನ್ಯವಾಗಿ ಯುವಕರು ಸುಮಾರು ಇಪ್ಪತ್ತು ವರ್ಷದ ವಯಸ್ಸಿನಲ್ಲಿ ಕುತೂಹಲ, ಸ್ನೇಹಿತರ ಒತ್ತಡ (ಪೀರ್ ಪ್ರೆಷರ್) ಮುಂತಾದ ಕಾರಣಗಳಿಂದ ಅಮಲು ಪದಾರ್ಥಗಳತ್ತ ಆಕರ್ಷಿತರಾಗುತ್ತಾರೆ. ಆರಂಭದಲ್ಲಿ ನಾವು ಅದನ್ನು ಸೇವಿಸುತ್ತೇವೆ, ನಂತರ ಅದು ನಮ್ಮನ್ನೇ ಆಳುತ್ತದೆ ಮತ್ತು ಕೊನೆಗೆ ನಾವು ಅದರ ದಾಸರಾಗುತ್ತೇವೆ. ಇದರ ಪರಿಣಾಮವಾಗಿ ವ್ಯಕ್ತಿಯ ಕುಟುಂಬ ಜೀವನವೇ ಹಾಳಾಗುವ ಸ್ಥಿತಿ ಉಂಟಾಗುತ್ತದೆ ಎಂದರು. ದುಶ್ಚಟ ನಿವಾರಣಾ ಚಿಕಿತ್ಸೆಯ ನಂತರ ಮತ್ತೆ ಆ ಚಟಕ್ಕೆ ಒಳಗಾಗದಂತೆ ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳುವುದು ಅತ್ಯಂತ ಮುಖ್ಯ. ಚಿಕಿತ್ಸೆಯ ಜೊತೆಗೆ ಕುಟುಂಬದ ಬೆಂಬಲ ಮತ್ತು ದೃಢ ಮನೋಬಲವೂ ಅಗತ್ಯ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದ ಧರ್ಮಸ್ಥಳದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನ ನಿರ್ದೇಶಕ ವಿವೇಕ್ ವಿನಸೆಂಟ್ ಪಾಯ್ಸ್, ಮಾದಕ ವ್ಯಸನವು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಸಂಪೂರ್ಣ ಕುಟುಂಬದ ಶಾಂತಿ ಮತ್ತು ನೆಮ್ಮದಿಯನ್ನೂ ಹಾಳುಮಾಡುವ ದುಶ್ಚಟ. ಇದರ ಪರಿಣಾಮವಾಗಿ ಕುಟುಂಬದಲ್ಲಿ ಅಶಾಂತಿ, ಆರ್ಥಿಕ ಸಂಕಷ್ಟ ಮತ್ತು ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ. ವ್ಯಸನಕ್ಕೆ ಒಳಗಾದ ವ್ಯಕ್ತಿ ನಿಧಾನವಾಗಿ ತನ್ನ ಜವಾಬ್ದಾರಿಗಳನ್ನು ಮರೆತು ಕುಟುಂಬದ ಸದಸ್ಯರಿಂದ ದೂರವಾಗುತ್ತಾನೆ. ಇದರಿಂದ ಪತ್ನಿ, ಮಕ್ಕಳು ಮತ್ತು ಹಿರಿಯರು ಮಾನಸಿಕವಾಗಿ ನೋವನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ಕುಟುಂಬದ ಸದಸ್ಯರ ನಡುವೆ ಕಲಹಗಳು ಹೆಚ್ಚಾಗಿ, ಮನೆಯ ನೆಮ್ಮದಿ ಸಂಪೂರ್ಣವಾಗಿ ಕಳೆದುಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ದುಶ್ಚಟಗಳಿಗೆ ಅವಕಾಶ ನೀಡದೆ, ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಬೇಕು. ಸಮಾಜದ ಸುಸ್ಥಿರ ಅಭಿವೃದ್ಧಿಗೆ ಆರೋಗ್ಯಕರ ಕುಟುಂಬ ವ್ಯವಸ್ಥೆ ಅತ್ಯಂತ ಮುಖ್ಯ. ಆದ್ದರಿಂದ ವ್ಯಸನದಿಂದ ದೂರವಿದ್ದು, ಕುಟುಂಬದ ನೆಮ್ಮದಿಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಪುನರ್ಜನ್ಮ ಕೇಂದ್ರದ ನಿರ್ದೇಶಕರಾದ ಡಾ. ವಿನಯ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಆಳ್ವಾಸ್, ಎಸ್‌ಡಿಎಂ ಹಾಗೂ ನಿಟ್ಟೆ ಸಂಸ್ಥೆಗಳ ಕಾರ್ಯ ಸದಾ ಶ್ಲಾಘನೀಯ. ಒಬ್ಬ ವ್ಯಕ್ತಿ ಒಂದು ಸಂಸ್ಥೆಯನ್ನು ಕಟ್ಟಬಹುದು; ಅದೇ ರೀತಿ ಒಂದು ಸಂಸ್ಥೆ ಕೂಡ ವ್ಯಕ್ತಿಯನ್ನು ರೂಪಿಸುತ್ತದೆ. ವ್ಯಕ್ತಿ ಮತ್ತು ಸಂಸ್ಥೆಗಳ ನಡುವೆ ಪರಸ್ಪರ ಸಂಬಂಧ ಅತ್ಯಂತ ಮಹತ್ವದ್ದಾಗಿದೆ. ಸಮಾಜದ ಏಳಿಗೆ ಜನರ ಸಕ್ರಿಯ ಭಾಗವಹಿಸುವಿಕೆಯಿಂದ ಸಾಧ್ಯವಾಗುತ್ತದೆ. ಆದ್ದರಿಂದ ಉತ್ತಮ ಸಮಾಜ ನಿರ್ಮಾಣ ಮತ್ತು ದೇಶದ ಅಭಿವೃದ್ಧಿ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವ್ಯಸನ ಮುಕ್ತರಾದ ವಿನಯ್ ಕುರ್ಡೇಕರ್, ಹರೀಶ್ ಕೋಟ್ಯಾನ್, ಸಚಿನ್, ಭವಿನ್, ಸೃಜನ್ ಹಾಗೂ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು.

ಆಳ್ವಾಸ್ ಪುನರ್ಜನ್ಮದ ಆಪ್ತ ಸಮಾಲೋಚಕ ಲೋಹಿತ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಆಪ್ತ ಸಮಾಲೋಚಕಿ ಸುಮನ್ ಪಿಂಟೋ ಸ್ವಾಗತಿಸಿ ಪ್ರಸ್ತಾವನೆ ಗೈದರು. ಬೆನ್ಸನ್ ಪಿಂಟೋ ವಂದಿಸಿದರು. ಕಾರ್ಯಕ್ರಮದಲ್ಲಿ ಪುನರ್ಜನ್ಮ ಕೇಂದ್ರದ ಸದಸ್ಯರು, ಚಿಕಿತ್ಸೆ ಪಡೆದು ಚೇತರಿಸಿಕೊಂಡವರು ಹಾಗೂ ಅವರ ಕುಟುಂಬಸ್ಥರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article