ಮೂಡುಬಿದಿರೆ ಕೈಗಾರಿಕಾ ವಲಯದ ಕೊಳಚೆ ನೀರು ಪುತ್ತಿಗೆ ಪಂಚಾಯತ್ ವ್ಯಾಪ್ತಿಗೆ: ಪಂಚಾಯತ್ ಮತ್ತು ಸ್ಥಳೀಯರಿಂದ ವಿರೋಧ, ಸರಿಪಡಿಸುವ ಭರವಸೆ ನೀಡಿದ ಮುಖ್ಯಾಧಿಕಾರಿ
Tuesday, March 10, 2026
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿರುವ ಕೈಗಾರಿಕ ವಲಯದಿಂದ ಹೊರ ಬಿಡುತ್ತಿರುವ ಕೊಳಚೆ ನೀರು ಪುತ್ತಿಗೆ ಪಂಚಾಯತ್ ವ್ಯಾಪ್ತಿಗೆ ಹರಿಯುತ್ತಿರುವ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿ ಕ್ರಮಕೈಗೊಳ್ಳುವಂತೆ ಪಂಚಾಯತ್ ಗಮನಕ್ಕೆ ತಂದಿದ್ದಾರೆ.
ಒಂಟಿಕಟ್ಟೆ ಕಡಲಕೆರೆ ಬಳಿಯಲ್ಲಿರುವ ಕೈಗಾರಿಕಾ ವಲಯದಲ್ಲಿ ಕಾಯ೯ನಿವ೯ಹಿಸುತ್ತಿರುವ ಕೆಲವು ಫ್ಯಾಕ್ಟರಿಗಳಿಂದ ಹೊರ ಬಿಡುತ್ತಿರುವ ಕೊಳಚೆ ನೀರು ಪಕ್ಕದಲ್ಲಿರುವ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಚರಂಡಿಯಲ್ಲಿ ಕಳೆದ ಕೆಲವು ದಿನಗಳಿಂದ ದೇವಸ್ಥಾನದ ಬಳಿ ವರೆಗೆ ಹರಿದು ಹೋಗುತ್ತಿದ್ದು ಈ ಬಗ್ಗೆ ಸ್ಥಳೀಯ ನಿವಾಸಿ ರಾಜೇಶ್ ಕಡಲಕೆರೆ ಅವರು ಪುತ್ತಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮ ಬಿ. ನಾಯಕ ಅವರ ಗಮನಕ್ಕೆ ತಂದಿದ್ದರು.
ಕಾಯ೯ಪ್ರವೃತರಾದ ಪಿಡಿಓ ಅವರು ಸಮಸ್ಯೆಯ ಬಗ್ಗೆ ಪುರಸಭಾ ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ಪಂಚಾಯತ್ ವ್ಯಾಪ್ತಿಗೆ ಬಿಡುತ್ತಿರುವ ಕೊಳಚೆ ನೀರನ್ನು ತಡೆಯುವಂತೆ ತಿಳಿಸಿದ್ದರು.
ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಅವರು ಮಂಗಳವಾರದಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪುರಸಭೆಯು ನಿಮಿ೯ಸಿರುವ ಫಿಟ್ ಗೆ ಸಂಪಕ೯ ಕಲ್ಪಿಸಿರುವ ಮೆಸ್ಕಾಂನವರು ಅಳವಡಿಸಿರುವ ಕೇಬಲ್ ಗಳ ಮೇಲೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಸಂದಭ೯ದಲ್ಲಿ ಮಣ್ಣು ಬಿದ್ದು ತಡೆಯಾಗಿರುವುದರಿಂದ ಕೊಳಚೆ ನೀರು ಟ್ಯಾಂಕ್ ಗೆ ಸೇರದೆ ಚರಂಡಿಯ ಮೂಲಕ ಹರಿದು ಹೋಗುತ್ತಿದೆ.
ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಅವರು ಕೇಬಲ್ ಗಳನ್ನು ಸರಿಪಡಿಸಿದ ನಂತರ ಪುರಸಭೆಯಿಂದ ತಕ್ಷಣ ಕಾಮಗಾರಿಯನ್ನು ಆರಂಭಿಸಿ ಕೊಳಚೆ ನೀರು ಪುತ್ತಿಗೆ ಪಂಚಾಯತ್ ವ್ಯಾಪ್ತಿಗೆ ಹೋಗದಂತೆ ವ್ಯವಸ್ಥೆ ಮಾಡಲಾಗುವುದೆಂದು ಸಿಇಓ ತಿಳಿಸಿದ್ದಾರೆ.

