ಸಂತ ಫಿಲೋಮಿನಾ ಕಾಲೇಜು ಹಾಗೂ ದ ವೆಬ್ ಪೀಪಲ್ ನಡುವೆ ಒಡಂಬಡಿಕೆ
ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜು ಹಾಗೂ ಖ್ಯಾತ ಐಟಿ ಕಂಪನಿ ದ ವೆಬ್ ಪೀಪಲ್ ನಡುವೆ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು.
ಕಾಲೇಜಿನ ಸ್ನಾತಕೋತ್ತರ ವಿಭಾಗದ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊರವರು ವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಅವರು ‘ಔದ್ಯೋಗಿಕ ಕ್ಷೇತ್ರಕ್ಕೆ ತಾರ್ಕಿಕವಾಗಿ ಯೋಚಿಸಬಲ್ಲ, ತ್ವರಿತವಾಗಿ ಹೊಂದಿಕೊಳ್ಳಬಲ್ಲ, ತಂಡದೊಂದಿಗೆ ಸಮನ್ವಯ ಸಾಧಿಸಬಲ್ಲ ಯುವಜನತೆಯ ಅವಶ್ಯಕತೆ ಇದೆ. ಈ ಸಹಭಾಗಿತ್ವದ ಮೂಲಕ ನಮ್ಮ ವಿದ್ಯಾರ್ಥಿಗಳಿಗೆ ಉದ್ಯಮ ಯೋಜನೆಗಳು, ಉದಯೋನ್ಮುಖ ತಂತ್ರಜ್ಞಾನಗಳು, ಉದ್ಯಮದ ಕಾರ್ಯವಿಧಾನಗಳು ಮತ್ತು ವೃತ್ತಿಪರ ಮಾನದಂಡಗಳ ಕುರಿತು ಅನುಭವ ಸಿಗಲಿದೆ. ಪಠ್ಯಪುಸ್ತಕಗಳು ಮತ್ತು ತರಗತಿಗಳ ಮಿತಿಯನ್ನು ಮೀರಿ, ಉದ್ಯಮ ತಜ್ಞರೊಂದಿಗೆ ಸಂವಹನ, ತರಬೇತಿ, ಇಂಟರ್ನ್ಶಿಪ್‌ಗಳು ಮತ್ತು ಪ್ರಾಯೋಗಿಕ ಅಧ್ಯಯನಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸ, ಸಾಮರ್ಥ್ಯ ಮತ್ತು ಉದ್ಯೋಗಾರ್ಹತೆಯನ್ನು ಹೆಚ್ಚಿಸಲಿವೆ.
ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾಸಂಸ್ಥೆಗಳು ಕೇವಲ ಪದವಿಗಳನ್ನು ನೀಡುವ ಸಂಸ್ಥೆಗಳಲ್ಲ ಬದಲಾಗಿ ವೃತ್ತಿಜೀವನವನ್ನು ನಿರ್ಮಿಸುವ, ಪ್ರತಿಭೆಯನ್ನು ರೂಪಿಸುವವರು ಮತ್ತು ದೇಶದ ಡಿಜಿಟಲ್ ಉದ್ಯಮಶಕ್ತಿಗೆ ಕೊಡುಗೆ ನೀಡುವ ಯುವಜನತೆಯನ್ನು ರೂಪಿಸುವ ಮಹತ್ತರ ಜವಾಬ್ದಾ ವಿದ್ಯಾಸಂಸ್ಥೆಗಳಿಗಿದೆ. ನಮ್ಮ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗುರುತಿಸಿ, ಭವಿಷ್ಯದ ಐಟಿ ವೃತ್ತಿಪರರನ್ನು ರೂಪಿಸುವಲ್ಲಿ ನಮ್ಮೊಂದಿಗೆ ಕೈಜೋಡಿಸಿರುವ ದ ವೆಬ್ ಪೀಪಲ್ ಸಂಸ್ಥೆಗೆ ಅಭಿನಂದನೆಗಳು ಎಂದು ಹೇಳಿದರು. ಈ ಸಹಭಾಗಿತ್ವದ ಮುಖಾಂತರ ದೊರೆಯುವ ಎಲ್ಲಾ ಅವಕಾಶಗಳನ್ನು ಉಪಯೋಗಿಸಿ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು.
ಒಡಂಬಡಿಕೆಗೆ ಸಹಿಹಾಗಿ ಮಾತನಾಡಿದ ಕಂಪನಿ ದ ವೆಬ್ ಪೀಪಲ್‌ನ ಮುಖ್ಯ ಸಂಸ್ಥಾಪಕ ಹಾಗೂ ಕಾರ್ಯನಿರ್ವಹಣಾಧಿಕಾರಿ ಆದಿತ್ಯ ಕಲ್ಲೂರಾಯರವರು ‘ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಹವಲಾರು ಪ್ರತಿಭಾವಂತರಿರುತ್ತಾರೆ ಆದರೆ ಅವರ ಪ್ರತಿಭೆಗಳಿಗೆ ಸಾಕಷ್ಟು ಅವಕಾಶಗಳಿರುವುದಿಲ್ಲ ಮಾತ್ರವಲ್ಲದೆ ಅವರು ಸಮರ್ಪಕ ಸಂವಹನ ಮಾಡಲು ಹಿಂಜರಿಯುವುದರಿಂದಾಗಿ ಸಾಕಷ್ಟು ಪ್ರತಿಭೆ ಇದ್ದರೂ ಪ್ರತಿಭೆ ಬೆಳಕಿಗೆ ಬರುವುದಿಲ್ಲ. ಈ ರೀತಿಯ ಒಡಂಬಡಿಕೆಗಳಿಂದಾಗಿ ವಿದ್ಯಾರ್ಥಿಗಳಿಗೆ ಕಲಿಕೆಯ ಸಂದರ್ಭದಲ್ಲಿಯೇ ಔದ್ಯೋಗಿಕ ಕ್ಷೇತ್ರದ ಬೇಡಿಕಗಳಿಗನುಗುಣವಾಗಿ ತಯಾರಾಗಬಹುದು“ ಎಂದು ಹೇಳಿ ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ಕಾಲೇಜಿನಲ್ಲಿ ದೊರೆತ ಅವಕಾಶಗಳು ತಮ್ಮಲ್ಲಿ ಶಿಸ್ತು, ಸಮಯಪ್ರಜ್ಞೆ ಹಾಗೂ ನಾಯಕತ್ವಗುಣಗಣನ್ನು ಅಭಿವೃದ್ಧಿಪಡಿಸಿದ ಸಂದರ್ಭಗಳನ್ನು ವಿದ್ಯಾರ್ಥಿಗಳೊಡನೆ ಹಂಚಿಕೊಂಡರು.
ನಂತರ ದ ವೆಬ್ ಪೀಪಲ್‌ನ ಸಹ ಸಂಸ್ಥಾಪಕ ಹಾಗೂ ಕಾರ್ಯನಿರ್ವಹಣಾಧಿಕಾರಿ ಶರತ್ ಶ್ರೀನಿವಾಸ್‌ಅವರು ಸಂದರ್ಭೋಚಿತವಾಗಿ ಮಾತನಾಡಿ ವಿದ್ಯಾರ್ಥಿದೆಸೆಯಲ್ಲಿ ಕೌಶಲ್ಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ರತನ್ ಮತ್ತು ಬಳಗ ಪ್ರಾರ್ಥಿಸಿದರು. ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗದ ಡೀನ್ ಡಾ. ವಿನಯಚಂದ್ರ ಸ್ವಾಗತಿಸಿ ಪ್ರಾಸ್ತಾವಿಕಮಾತುಗಳನ್ನಾಡಿದರು. ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ಬಿ. ಒಡಂಬಡಿಕೆಯ ಮುಖ್ಯಾಂಶಗಳನ್ನು ಸಭೆಗೆ ತಿಳಿಯಪಡಿಸಿದರು. ಶೋಧನ್ ಪಿ ಜಿ ವಂದಿಸಿದರು. ನೀಲಮ್ ಕುಟ್ಟಪ್ಪ ಕಾರ್ಯಕ್ರಮ ನಿರೂಪಿಸಿದರು. ಪ್ಲೇಸ್ಮೆಂಟ್ ಅಧಿಕಾರಿ ಅಭಿಷೇಕ್ ಸುವರ್ಣ ಉಪಸ್ಥಿತರಿದ್ದರು. ಪ್ರಥಮ ಹಾಗೂ ದ್ವಿತೀಯ ಎಂಸಿಎ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.