ಕ್ರಿಕೆಟ್ ಬೆಟ್ಟಿಂಗ್: ಓರ್ವ ಪೊಲೀಸರ ವಶಕ್ಕೆ
ಕುಂದಾಪುರ: ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ನೆಪ ಮಾಡಿಕೊಂಡು ಅಕ್ರಮ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಪ್ರಕರಣವನ್ನು ಕೋಟ ಪೊಲೀಸರು ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬ್ರಹ್ಮಾವರ ತಾಲೂಕಿನ ಕೋಟ ಮಣೂರು ಗ್ರಾಮದ ಬಾಳೆಬೆಟ್ಟು ಬಸ್ ನಿಲ್ದಾಣದ ಬಳಿಯಿಂದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಏಪ್ರಿಲ್ 2ರಂದು ಸಂಜೆ 5.45ರ ಸುಮಾರಿಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಹಾಂತೇಶ್ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೋರ್ವ ಮೊಬೈಲ್ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಾ ಕೆಕೆಆರ್ ಮತ್ತು ಎಸ್‌ಆರ್‌ಎಚ್ ತಂಡಗಳ ನಡುವಿನ ಐಪಿಎಲ್ ಟಿ-20 ಪಂದ್ಯಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಸುತ್ತಿರುವುದು ಪತ್ತೆಯಾಯಿತು.
ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನು ಆದಿತ್ಯ ಶೆಟ್ಟಿ (28) ಎಂದು ತಿಳಿದುಬಂದಿದ್ದು, ನೂಜಿಯ ಸಂದೀಪ ಗಾಣಿಗನ ಸೂಚನೆಯಂತೆ ‘ಪಾರ್ಕರ್’ ಎಂಬ ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್ ಮೂಲಕ ಅಕ್ರಮ ದಂಧೆಯಲ್ಲಿ ತೊಡಗಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.