ಮನೆಗಣತಿ: ಆನ್‌ಲೈನ್‌ನಲ್ಲಿ ನಮೂದಿಸಲು ಕರೆ
ಮಂಗಳೂರು: ಭಾರತದ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ಕಾರ್ಯಾಲಯ ಇವರ ಪರವಾಗಿ ಜನಗಣತಿ ಕಾಯ್ದೆ-1948ರ ಪ್ರಕಾರ ಮಂಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ಭಾರತದ ಮೊದಲ ಡಿಜಿಟಲ್ ಜನಗಣತಿ ಕಾರ್ಯವನ್ನು 2 ಹಂತಗಳಲ್ಲಿ ನಡೆಸಿ ಗಣತಿ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಈ ಪೈಕಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಯಂ ಮನೆ ಗಣತಿ ಕಾರ್ಯವನ್ನು ಮಾಡಲು ಅವಕಾಶಗಳನ್ನು ನೀಡಲಾಗಿರುತ್ತದೆ. ಅದರಂತೆ ಕಾಯ್ದೆಯ ಪ್ರಕಾರ ತಮ್ಮ ಮಾಹಿತಿ ಹೆಸರು ಮತ್ತು ಗುರುತುಗಳ ಗೌಪ್ಯವಾಗಿ ಇರಿಸಲಾಗುತ್ತದೆ. ಯಾವುದೇ ತೆರಿಗೆ ಅಥವಾ ಪರಿಶೋಧನಾ ಉದ್ದೇಶಕ್ಕೆ ದತ್ತಾಂಶವನ್ನು ಬಳಸಿಕೊಳ್ಳುವುದಿಲ್ಲ. ಇದನ್ನು ಸುರಕ್ಷಿತವಾಗಿ ಇರಿಸಲಾಗುತ್ತದೆ.
ಈ ನಿಟ್ಟಿನಲ್ಲಿ ಎ.1 ರಿಂದ 15 ರವರೆಗೆ ನಿರ್ದೇಶನಾಲಯದಿಂದ ನೀಡಿರುವ ಸರಳವಾದ ಹಂತಗಳನ್ನು ಅನುಸರಿಸುವುದರ ಮೂಲಕ 15-20 ನಿಮಿಷಗಳಲ್ಲಿ ತಮ್ಮ ಮನೆಯ ಸ್ವಯಂ ಗಣತಿಯನ್ನು ಮಾಡಿಕೊಂಡು ಏಕೀಕೃತ ಸ್ವಯಂ ಗಣತಿ ಗುರುತಿನ ಸಂಖ್ಯೆಯನ್ನು ಪಡೆಯಬಹುದಾಗಿರುತ್ತದೆ. ಪರಿಶೀಲನೆಗೆ ಬರುವ ಗಣತಿದಾರರಗೆ ಐಡಿಯನ್ನು ಒದಗಿಸಿ ಮನೆಗಣತಿ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿರುತ್ತದೆ. ತಮ್ಮ ಸ್ವಯಂ ಮನೆ ಗಣತಿಯ ಕಾರ್ಯದ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಗಣತಿದಾರರು ಮತ್ತು ಮೇಲ್ವಿಚಾರಕರ ಪರಿಶೀಲನೆಗೆ ಒಳಪಟ್ಟಿರುತ್ತದೆ.
ಮಂಗಳೂರು ತಾಲೂಕಿನ ಎಲ್ಲಾ ಸಾರ್ವಜನಿಕ/ನಾಗರೀಕರು https://se.census.gov.in/ ವೆಬ್ಸೈಟ್ ಲಿಂಕ್ ಮೂಲಕ ತಮ್ಮ ಮನೆಯ ಗಣತಿಯನ್ನು ಮಾಡಿಕೊಳ್ಳಬಹುದು ಎಂದು ಮಂಗಳೂರು ತಾಲ್ಲೂಕು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.