ಸಶಸ್ತ್ರ ಪಡೆಗಳಲ್ಲಿ ವೃತ್ತಿ ಅವಕಾಶ: ವಿಶೇಷ ಉಪನ್ಯಾಸ
ನವದೆಹಲಿಯ ಸೇನಾ ಪ್ರಧಾನ ಕಚೇರಿ ಹೆಚ್ಚುವರಿ ನಿವೃತ್ತ ಮಹಾನಿರ್ದೇಶಕ ಮೇಜರ್ ಜನರಲ್ ಎಂ.ವಿ. ಭಟ್, ಸೈನಿಕ ಅಂದರೆ ಕೇವಲ ಬಂದೂಕನ್ನು ಹಿಡಿದು ಶತ್ರುಗಳ ವಿರುದ್ಧ ಹೋರಾಡಲು ಗುಂಡು ಹಾರಿಸುವುದು ಅಷ್ಟೇ ಅಲ್ಲ; ಅದರ ಹಿಂದೆ ಇನ್ನೂ ಹಲವು ವಿಷಯಗಳಿವೆ. ಅವೆಲ್ಲವೂ ಸಮನ್ವಯದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರವೇ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯ. ವೃತ್ತಿಜೀವನ ಸಮಯ ನಿರ್ವಹಣೆ, ಶಿಸ್ತು, ಸಾಮರ್ಥ್ಯ, ಧೈರ್ಯ, ಇತರರ ಬಗ್ಗೆ ಕಾಳಜಿ, ಪ್ರಾಮಾಣಿಕತೆ, ಸಮಗ್ರತೆ ಇತ್ಯಾದಿ ಅಂಶಗಳನ್ನು ಪ್ರತಿನಿಧಿಸುತ್ತದೆ ಎಂದರು.
ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನ ಆಯ್ಕೆ ಮಾಡಿಕೊಳ್ಳ ಬಯಸುವ ಆಕಾಂಕ್ಷೆಗಳು ಎನ್ಡಿಎ, ಸಿಡಿಎಸ್, ಎಸ್‌ಎಸ್ಬಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆಯಾಗಲು ಅವಕಾಶವಿದೆ. ಕಾಲಾಳುಪಡೆ, ಪೈಲಟ್, ನೌಕಾ ಕಾರ್ಯಾಚರಣೆಗಳಂತಹ ವಿವಿಧ ರೀತಿಯ ಪಾತ್ರಗಳಿರುತ್ತವೆ. ಅಲ್ಲದೇ, ಲಾಜಿಸ್ಟಿಕ್ಸ್, ಶಿಕ್ಷಣ, ವೈದ್ಯಕೀಯ ಸೇವೆಯಂತಹ ಬೆಂಬಲಿತ ಹುದ್ದೆಗಳೂ ಇವೆ ಎಂದು ತಿಳಿಸಿದರು.
ಎನ್‌ಸಿಸಿಯ ವಿಂಗ್ ಕಮಾಂಡಿಂಗ್ ಆಫೀಸರ್, ಕಮಾಂಡರ್ ಪ್ರವೀಣ್ ಕಾವೇರಿಯಪ್ಪ, ಬದುಕಿನಲ್ಲಿ ಗೌರವ ಮತ್ತು ಪ್ರತಿಷ್ಠೆ, ಸಾಹಸ, ಉದ್ಯೋಗ ಭದ್ರತೆ ಹಾಗೂ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಸೈನ್ಯಕ್ಕೆ ಸೇರುವ ಅಭ್ಯರ್ಥಿಗಳಿಗೆ ಲಭ್ಯವಾಗುತ್ತದೆ. ಅದಕ್ಕಾಗಿ, ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು. ಆಯ್ಕೆ ಪ್ರಕ್ರಿಯೆ ಹೆಚ್ಚು ಸ್ಪರ್ಧಾತ್ಮಕವಾಗಿದ್ದು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಬದುಕಿನಲ್ಲಿ ಶಿಸ್ತನ್ನು ರೂಪಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ಸಲಹೆ ನೀಡಿದರು.
ಬದಿಯಡ್ಕದ ಕುನಿಲ್ ಶಾಲೆಯ ನಿವೃತ್ತ ಪಿಡಿಜಿ ಮತ್ತು ಸಿಇಒ ವಿಕ್ರಮ್ ದತ್ತ, ಸೇನೆ ಸೇರುವ ದೃಢನಿಶ್ಚಯದ ಜೊತೆಗೆ ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು. ಸೇನೆಯಲ್ಲಿ ಅಲ್ಪಾವಧಿ ಸೇವೆ ಸಲ್ಲಿಸಲು ಅಗ್ನಿವೀರ್ ಯೋಜನೆ ಸಹಕಾರಿ. ಸೇನೆಯಲ್ಲಿ ಹಲವು ಅವಕಾಶಗಳಿದ್ದು ಅವುಗಳನ್ನು ಬದ್ಧತೆಯಿಂದ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್., ಸೈನ್ಯಕ್ಕೆ ಸೇರುವುದರಿಂದ ಆರ್ಥಿಕ ಸಬಲೀಕರಣದ ಜೊತೆಗೆ ರಾಷ್ಟ್ರ ರಕ್ಷಣೆಯಂತಹ ಸೇವೆ ಮಾಡಲು ಅವಕಾಶ ಲಭ್ಯವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ, ರೋಟರಿ ವೃತ್ತಿ ಮಾರ್ಗದರ್ಶನ ಸಮಿತಿ ಅಧ್ಯಕ್ಷ ಲೋಹಿದಾಸ್ ಆರ್., ರೋಟರಿ ಕ್ಲಬ್ ಮಂಗಳೂರು ಉತ್ತರ ವಿಭಾಗದ ಕಾರ್ಯದರ್ಶಿ ಶಾಂಭವಿ ಪ್ರಭು, ಭೂದಳ ವಿಭಾಗದ ಮೇಜರ್ ಡಾ. ಜಯರಾಜ್ ಎನ್., ನೌಕಾ ವಿಭಾಗದ ಕಮಾಂಡರ್ ಪ್ರೊ. ಯತೀಶ್ ಕುಮಾರ್ ಉಪಸ್ಥಿತರಿದ್ದರು.