Covid-19 ಲಾಕ್‌ಡೌನ್ ಆದೇಶ ಉಲ್ಲಂಘನೆ: ಎಕ್ಸ್‌ಪರ್ಟ್ ಗ್ರೂಪ್ ಅಧ್ಯಕ್ಷ ನರೇಂದ್ರ ನಾಯಕ್‌ಗೆ 6 ಸಾವಿರ ರೂ. ದಂಡ

Covid-19 ಲಾಕ್‌ಡೌನ್ ಆದೇಶ ಉಲ್ಲಂಘನೆ: ಎಕ್ಸ್‌ಪರ್ಟ್ ಗ್ರೂಪ್ ಅಧ್ಯಕ್ಷ ನರೇಂದ್ರ ನಾಯಕ್‌ಗೆ 6 ಸಾವಿರ ರೂ. ದಂಡ

ಮಂಗಳೂರು: ಕೋವಿಡ್-19 ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಗೇಟ್ ಮುಂದೆ ವಿದ್ಯಾರ್ಥಿಗಳ ಪೋಷಕರು ಸೇರಲು ಅವಕಾಶ ನೀಡಿದ್ದ ಪ್ರಕರಣದಲ್ಲಿ ಎಕ್ಸ್‌ಪರ್ಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಅಧ್ಯಕ್ಷ ನರೇಂದ್ರ ನಾಯಕ್ ಅವರಿಗೆ ಮಂಗಳೂರಿನ ನ್ಯಾಯಾಲಯ 6 ಸಾವಿರ ರೂ. ದಂಡ ವಿಧಿಸಿದೆ.

ಮಂಗಳೂರಿನ ಮೂರನೇ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶ ಇ.ಎಸ್. ಸುರೇಶ್ ಅವರು ಮೇ 22ರಂದು ನೀಡಿದ ತೀರ್ಪಿನಲ್ಲಿ, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ-2020ರ ಸೆಕ್ಷನ್ 5(3J) ಅಡಿಯಲ್ಲಿ 5 ಸಾವಿರ ರೂ. ದಂಡ ಪಾವತಿಸುವಂತೆ ಆದೇಶಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಏಳು ದಿನಗಳ ಸರಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 269ರ ಅಡಿಯಲ್ಲಿ ಅಪರಾಧ ಎಸಗಿರುವುದಕ್ಕೆ 1 ಸಾವಿರ ರೂ. ದಂಡ ವಿಧಿಸಲಾಗಿದ್ದು, ಅದನ್ನು ಪಾವತಿಸದಿದ್ದರೆ ಎರಡು ದಿನಗಳ ಸರಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಆರೋಪಪಟ್ಟಿಯ ಪ್ರಕಾರ, 2021ರ ಎಪ್ರಿಲ್ 27ರಂದು ಕೋವಿಡ್ ಲಾಕ್‌ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಳಚ್ಚಿಲ್ ಕ್ಯಾಂಪಸ್‌ನ ವಿದ್ಯಾರ್ಥಿನಿಲಯದಲ್ಲಿದ್ದ ವಿದ್ಯಾರ್ಥಿಗಳ ಪೋಷಕರು ಕಾಲೇಜಿನ ಗೇಟ್ ಮುಂದೆ ಜಮಾಯಿಸಿದ್ದರು. ದೂರದ ಪ್ರದೇಶಗಳಿಂದ ಆಗಮಿಸಿದ್ದ ಪೋಷಕರೊಂದಿಗೆ ವಿದ್ಯಾರ್ಥಿಗಳನ್ನು ಕಳುಹಿಸದೆ, ಪೋಷಕರು ಕಾಲೇಜಿನ ಮುಂದೆ ಗುಂಪುಗೂಡಲು ಅವಕಾಶ ಮಾಡಿಕೊಟ್ಟ ಆರೋಪ ನರೇಂದ್ರ ನಾಯಕ್ ವಿರುದ್ಧ ಹೊರಿಸಲಾಗಿತ್ತು.

2021ರ ಏಪ್ರಿಲ್ 26ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶದಲ್ಲಿ ಶಾಲೆಗಳು, ಕಾಲೇಜುಗಳು ಹಾಗೂ ತರಬೇತಿ ಸಂಸ್ಥೆಗಳ ಕಾರ್ಯಾಚರಣೆಗೆ ನಿರ್ಬಂಧ ವಿಧಿಸಲಾಗಿತ್ತು. ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಮೂಲಕ ಮಾತ್ರ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿತ್ತು ಎಂದು ನ್ಯಾಯಾಲಯ ಉಲ್ಲೇಖಿಸಿದೆ.

67 ಪುಟಗಳ ತೀರ್ಪಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳು ಪ್ರಾಸಿಕ್ಯೂಷನ್‌ನ ವಾದವನ್ನು ಬೆಂಬಲಿಸಿರುವು ದಾಗಿ ನ್ಯಾಯಾಲಯ ಹೇಳಿದೆ. ಘಟನೆಗೆ ಸಂಬಂಧಿಸಿದ ಫೋಟೊಗಳು ಮತ್ತು ವೀಡಿಯೊಗಳನ್ನೂ ಸಾಕ್ಷ್ಯವಾಗಿ ಸಲ್ಲಿಸಲಾಗಿತ್ತು. ನರೇಂದ್ರ ನಾಯಕ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article