ಬಸ್ ಸ್ಟ್ಯಾಂಡಿನಲ್ಲಿ ಪಾಕಿ೯ಂಗ್ ಮಾಡುವ ಕಾರ್ ಗಳಿಗೆ ಲಾಕ್, ವನ್-ವೇ ಸಂಚಾರ, ತ್ರಿಬಲ್ ವಾಹನ ರೈಡಿಂಗ್ ಗೆ ದಂಡ: ಶಾಸಕ ಕೋಟ್ಯಾನ್ ಪೊಲೀಸರಿಗೆ ಸೂಚನೆ

ಬಸ್ ಸ್ಟ್ಯಾಂಡಿನಲ್ಲಿ ಪಾಕಿ೯ಂಗ್ ಮಾಡುವ ಕಾರ್ ಗಳಿಗೆ ಲಾಕ್, ವನ್-ವೇ ಸಂಚಾರ, ತ್ರಿಬಲ್ ವಾಹನ ರೈಡಿಂಗ್ ಗೆ ದಂಡ: ಶಾಸಕ ಕೋಟ್ಯಾನ್ ಪೊಲೀಸರಿಗೆ ಸೂಚನೆ


ಮೂಡುಬಿದಿರೆ: ಪೇಟೆಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟನೆ, ವನ್-ವೇಯಲ್ಲಿ ಸಂಚಾರ, ತ್ರಿಬಲ್ ರೈಡಿಂಗ್ ಸಹಿತ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡುವವರಿಗೆ ದಂಡ ಹಾಗೂ ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಕಾರು, ದ್ವಿಚಕ್ರ ವಾಹನಗಳನ್ನು ಸಂಜೆ ವರೆಗೆ ನಿಲ್ಲಿಸಿ ಮಂಗಳೂರಿಗೆ ತೆರಳುವವರ ವಾಹನಗಳಿಗೆ ಪೊಲೀಸರು ಮುಲಾಜಿಲ್ಲದೆ ಲಾಕ್ ಮಾಡುವಂತೆ ಶಾಸಕ ಉಮಾನಾಥ ಎ. ಕೋಟ್ಯಾನ್ ಸೂಚಿಸಿದ್ದಾರೆ. 


ಅವರು “ನಮ್ಮ ಮೂಡುಬಿದಿರೆ ಫೋರಂ” ವತಿಯಿಂದ ಮೂಡುಬಿದಿರೆ ವ್ಯಾಪ್ತಿಯಲ್ಲಿ ಗುರುತಿಸಲಾದ 36 ಪ್ರಮುಖ ಸಾರ್ವಜನಿಕ ಸಮಸ್ಯೆಗಳ ಕುರಿತು ಕನ್ನಡ ಭವನದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. 


ಸರಕಾರಿ, ಖಾಸಗಿ, ಬೆಂಗಳೂರು ಹಾಗೂ ಮುಂಬೈ ಬಸ್ ಗಳು ಏಕಮುಕವಾಗಿ ಸಂಚರಿಸುತ್ತಿರುವುದರಿಂದ, ಆಟೋ ಚಾಲಕರು ಎಲ್ಲೆಂದರಲ್ಲಿ ಜನರನ್ನು ಹತ್ತಿಸುವುದು ಮತ್ತು ಇಳಿಸುವುದರಿಂದ ಇತರ ವಾಹನಗಳ ಸಂಚಾರಕ್ಕೆ, ಪಾದಾಚಾರಿಗಳಿಗೆ ತೊಂದರೆಯನ್ನು ಅನುಭವಿಸುತ್ತಿರುವ ಬಗ್ಗೆ "ನಮ್ಮ ಫೋರಂ"ನ ಅಕ್ಷಯ್ ಜೈನ್ ಶಾಸಕರ ಗಮನಕ್ಕೆ ತಂದಾಗ,  ಸಮಸ್ಯೆಗಳನ್ನು ಯಾವ ರೀತಿ ನಿವಾರಿಸಬೇಕೆಂಬುದರ ಬಗ್ಗೆ ಪೊಲೀಸರೆ ಸಭೆ ನಡೆಸಿ 10 ದಿನಗಳೊಳಗಾಗಿ ಪರಿಹಾರವನ್ನು ಕಂಡುಕೊಂಡು ಮುಂದಿನ ಮೀಟಿಂಗ್ ನಲ್ಲಿ ಕ್ರಮ ಕೈಗೊಂಡಿರುವ ಬಗ್ಗೆ ತಿಳಿಸಬೇಕೆಂದರು. 


ಅಕ್ಷಯ್ ಕೆ. ಜೈನ್ ಅವರು ಕಳೆದ ಮೂರು ವರ್ಷಗಳಿಂದ ಸ್ಥಳೀಯವಾಗಿ ಅಧ್ಯಯನ ನಡೆಸಿ ಸಂಗ್ರಹಿಸಲಾದ 36 ಪ್ರಮುಖ ಸಮಸ್ಯೆಗಳ ವರದಿಯನ್ನು ಸಭೆಯಲ್ಲಿ ಮಂಡಿಸಿ ಮಾತನಾಡಿ, ಕೆಲವು ಸಮಸ್ಯೆಗಳನ್ನು ಕೇವಲ ಸರ್ಕಾರ ಅಥವಾ ಇಲಾಖೆಗಳು ಮಾತ್ರವಲ್ಲದೆ ಸ್ಥಳೀಯ ಸಂಘ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದ ಮೂಲಕವೂ ಪರಿಹರಿಸಬಹುದಾಗಿದೆ. ಮೂಡುಬಿದಿರೆಯನ್ನು ಇನ್ನಷ್ಟು ಸುಂದರ, ಸುರಕ್ಷಿತ ಹಾಗೂ ಮಾದರಿ ಪಟ್ಟಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.

ಟ್ರಾಫಿಕ್ ಸಮಸ್ಯೆಗಳು, ಪಾರ್ಕಿಂಗ್ ಅವ್ಯವಸ್ಥೆ, ರಸ್ತೆ ಸುರಕ್ಷತೆ, ಚರಂಡಿ ವ್ಯವಸ್ಥೆ, ಸಾರ್ವಜನಿಕ ಆರೋಗ್ಯ, ತ್ಯಾಜ್ಯ ನಿರ್ವಹಣೆ, ವಿದ್ಯುತ್ ಸಮಸ್ಯೆಗಳು, ಪ್ರವಾಸೋದ್ಯಮ ಅಭಿವೃದ್ಧಿ, ಅಕ್ರಮ ಒತ್ತುವರಿ, ಸಾರ್ವಜನಿಕ ಮೂಲಸೌಕರ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವರವಾದ ಮಾಹಿತಿಯನ್ನು ಅವರು ಸಭೆಯ ಗಮನಕ್ಕೆ ತಂದರು.

ಸಾವ೯ಜನಿಕರ ಪರವಾಗಿ ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಸಾರಿಗೆ ಉದ್ಯಮಿ ನಾರಾಯಣ ಪಿ. ಎಂ, ಪುರಸಭೆಯ ಮಾಜಿ ಸದಸ್ಯ ರಾಜೇಶ್ ನಾಯ್ಕ್, ಬೆಳುವಾಯಿ ಗ್ರಾ. ಪಂ. ನ ಮಾಜಿ ಸದಸ್ಯ ಭರತ್ ಶೆಟ್ಟಿ, ರೋಟರಿ ಟೆಂಪಲ್ ಟೌನ್ ನ ಅಧ್ಯಕ್ಷ ಹರೀಶ್ ಎಂ. ಕೆ, ಜವನೆರ್ ಬೆದ್ರದ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ನೇತಾಜಿ ಬ್ರಿಗೇಡ್ ನ ಸಂಚಾಲಕ ರಾಹುಲ್ ಕುಲಾಲ್, ಪತ್ರಕರ್ತರಾದ ಧನಂಜಯ ಮೂಡುಬಿದಿರೆ ಬಿ. ಸೀತಾರಾಮ ಆಚಾಯ೯, ಯಶೋಧರ ವಿ. ಬಂಗೇರಾ, ಕೃಷ್ಣ ಕುಮಾರ್   ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. 

ಸಾರ್ವಜನಿಕರ ಅಭಿಪ್ರಾಯಗಳನ್ನು ಆಲಿಸಿದ ಶಾಸಕರು, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಮೂಡುಬಿದಿರೆಯ ಪ್ರಮುಖ ಸಮಸ್ಯೆಗಳ ಕುರಿತು ಸಮಗ್ರವಾಗಿ ಅಧ್ಯಯನ ನಡೆಸಲು ಸಲಹಾ ಸಮಿತಿ (Advisory Committee) ರಚಿಸುವ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಮಿತಿಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಸಂಬಂಧಿತ ಇಲಾಖೆಗಳ ಸಹಭಾಗಿತ್ವದೊಂದಿಗೆ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕ್ರಮಗಳ ಕುರಿತು ಮುಂದಿನ 10 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದರು. 

ತಾಲೂಕು ತಹಸೀಲ್ದಾರ್ ಶ್ರೀಧರ್ ಮುದಲಮನಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವಿವಿಧ ಇಲಾಖೆಗಳ ಅಧಿಕಾರಿಗಳು, ಪೊಲೀಸ್ ಇಲಾಖೆ, ತಾಲ್ಲೂಕು ಆಡಳಿತದ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕ ಪ್ರಮುಖರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article