ಪತ್ತನಾಜೆ: ಧರ್ಮಸ್ಥಳದಲ್ಲಿ ವಿಶೇಷ ಸೇವೆ, ಉತ್ಸವಗಳ ಸಮಾಪನ
Tuesday, May 26, 2026
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪತ್ತನಾಜೆ ಪ್ರಯುಕ್ತ ಏ.೨೫ ರಂದು ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ವಿಶೇಷ ರಂಗಪೂಜೆ ನಡೆದು ಶ್ರೀ ದೇವರ ಉತ್ಸವ ಮೂರ್ತಿಯ ಬಲಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆ, ಧ್ವಜ ಮರ ಅವರೋಹಣದೊಂದಿಗೆ ದೇವರ ಉತ್ಸವ ಮೂರ್ತಿ ಗರ್ಭಗುಡಿ ಸೇರುವ ಮೂಲಕ ವಾರ್ಷಿಕ ವಿಶೇಷ ಸೇವೆಗಳು ಹಾಗೂ ಉತ್ಸವಗಳ ಸಮಾಪನಗೊಂಡಿತು.
ಮುಂದೆ ಕಾರ್ತೀಕ ಮಾಸದ ದೀಪೋತ್ಸವದೊಂದಿಗೆ ಎಂದಿನಂತೆ ವಿಶೇಷ ಸೇವೆಗಳು ಹಾಗೂ ಉತ್ಸವಗಳು ಆರಂಭಗೊಳ್ಳುತ್ತವೆ. ಸೋಮವಾರವಾದ ಕಾರಣ ಭಕ್ತಾದಿಗಳ ಸಂದಣಿ ಅಧಿಕವಾಗಿತ್ತು. ಕ್ಷೇತ್ರದ ಸಿಬಂದಿ ವರ್ಗ, ಊರ ಪರಊರ ಭಕ್ತಾದಿಗಳು ಉತ್ಸವದಲ್ಲಿ ಭಾಗವಹಿಸಿದ್ದರು.
ಯಕ್ಷಗಾನ ಮೇಳದ ತಿರುಗಾಟ ಸಮಾಪ್ತಿ:
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ವಾರ್ಷಿಕ ತಿರುಗಾಟ ಕೊನೆಗೊಂಡು ಮೇಳದ ಶ್ರೀ ಮಹಾಗಣಪತಿ ದೇವರಿಗೆ ಧರ್ಮಸ್ಥಳದ ಮಂಜುಕೃಪಾದಲ್ಲಿ ಮದ್ಯಾಹ್ನ ಗಣ ಯಾಗ, ಮಹಾಪೂಜೆ ನಡೆಯಿತು. ಸಂಜೆ ಮಹಾಪೂಜೆ ಬಳಿಕ ಕ್ಷೇತ್ರದ ಸಕಲ ಗೌರವಗಳೊಂದಿಗೆ ಸಂಭ್ರಮದ ಮೆರವಣಿಗೆಯಲ್ಲಿ ಶ್ರೀ ಗಣಪತಿ ದೇವರನ್ನು ಭವ್ಯ ಶೋಭಾಯಾತ್ರೆಯಲ್ಲಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಆನೆಗಳು, ಬಸವ, ಕೇರಳದ ಚೆಂಡೆ ಬಳಗ, ಜಾಗಟೆ, ವಾದ್ಯಮೇಳದ ವೈಭವಗಳೊಂದಿಗೆ ಶ್ರೀ ದೇವರ ದರ್ಶನ ಸೇವೆ ನಡೆದು ಛತ್ರಗಣಪತಿ ಗುಡಿಯಲ್ಲಿ ಪೂಜೆ ನೆರವೇರಿಸಲಾಯಿತು.
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಡಾ. ಹೇಮಾವತಿ ಹೆಗ್ಗಡೆ, ಮೇಳದ ಯಜಮಾನ ಡಿ. ಹರ್ಷೇನ್ದ್ರ ಕುಮಾರ್, ಸುಪ್ರಿಯಾ ಹರ್ಷೇನ್ದ್ರ ಕುಮಾರ್, ಪಾರುಪತ್ಯೆದಾರ ಲಕ್ಷ್ಮೀನಾರಾಯಣ ರಾವ್, ಸುಬ್ರಹ್ಮಣ್ಯ ಪ್ರಸಾದ್, ಬಿ. ಭುಜಬಲಿ, ಸೀತಾರಾಮ ತೋಳ್ಪಡಿತ್ತಾಯ, ಉಜಿರೆ ಅಶೋಕ ಭಟ್, ಮೇಳದ ವ್ಯವಸ್ಥಾಪಕ ಗಿರೀಶ್ ಹೆಗ್ಡೆ, ಮೇಳದ ಕಲಾವಿದರು ಹಾಗೂ ಕ್ಷೇತ್ರದ ಸಿಬಂದಿ ವರ್ಗ, ಭಕ್ತಾದಿಗಳು ಸಂಭ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮಂಗಳವಾರದಿಂದ 3 ದಿನಗಳ ಕಾಲ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಸೇವೆಯಾಟದೊಂದಿಗೆ ಕಲಾವಿದರು ಗೆಜ್ಜೆ ಬಿಚ್ಚುವ ಮೂಲಕ ಪ್ರಸಕ್ತ ಸಾಲಿನ ವಾರ್ಷಿಕ ತಿರುಗಾಟಕ್ಕೆ ಮಂಗಳ ಹಾಡಲಿದ್ದಾರೆ.



