ಬೆಳ್ತಂಗಡಿಯಲ್ಲಿ ಗಾಳಿ, ಮಳೆ: ಧರೆಗುರುಳಿದ ವಿದ್ಯುತ್ ಕಂಬಗಳು
ಉಜಿರೆ: ಬೆಳ್ತಂಗಡಿ ತಾಲೂಕಿನ ಹಲವೆಡೆ ಗುರುವಾರ ಸಂಜೆ, ಗಾಳಿ, ಗುಡುಗು, ಸಿಡಿಲು ಸಹಿತ ಮಳೆಯಾಗಿದೆ.
ಬೆಳ್ತಂಗಡಿ ನಗರ, ಉಜಿರೆ, ಕಲ್ಮಂಜ, ಮುಂಡಾಜೆ, ಕಡಿರುದ್ಯಾವರ, ಕಕ್ಕಿಂಜೆ, ತೋಟತ್ತಾಡಿ, ಚಿಬಿದ್ರೆ, ಚಾರ್ಮಾಡಿ, ಕರಂಬಾರು, ಶಿರ್ಲಾಲು, ಮಲವಂತಿಗೆ, ಮಿತ್ತಬಾಗಿಲು, ಗೇರುಕಟ್ಟೆ ಮುಂತಾದ ಕಡೆ ಭಾರಿ ಮಳೆ ಸುರಿದಿದೆ.
ಕಡಿರುದ್ಯಾವರ ಗ್ರಾಮದ ಮಲ್ಲಡ್ಕ ಎಂಬಲ್ಲಿ ಗಾಳಿ ಮಳೆಗೆ ಸುಮಾರು 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದೆ. ಕೊಲ್ಲಿ-ಕಿಲ್ಲೂರು ರಸ್ತೆಯಲ್ಲಿ ರಸ್ತೆಗೆ ಮರ ಉರುಳಿ ಬಿದ್ದು ಎರಡು ವಿದ್ಯುತ್ ಕಂಬಗಳು ಮುರಿದಿವೆ. ತಾಲೂಕಿನ ಅಲ್ಲಲ್ಲಿವಿದ್ಯುತ್ ಕಂಬಗಳು ಧರೆಗುರುಳಿದ ಹಿನ್ನಲೆಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಕಂಡು ಬಂದಿದೆ.ಕೆಲವು ಕಡೆ ಭಾರೀ ಸಿಡಿಲು ಬಡಿದ ಕಾರಣ, ಹಲವು ಮನೆಗಳ ವಿದ್ಯುತ್ ಉಪಕರಣಗಳಿಗೂ ಹಾನಿ ಉಂಟಾಗಿದೆ.
ತಾಲೂಕಿನಲ್ಲಿ ಹಲವು ಕಡೆಗಳಲ್ಲಿ ನೂರಾರು ಅಡಕೆ ಮರಗಳು ಧರೆಗೆ ಉರುಳಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಲವೆಡೆ ಮಳೆ ನೀರಿನೊಂದಿಗೆ ರಸ್ತೆಗೆ ಮಣ್ಣು ಹರಿದು ಬಂದಿದ್ದು, ವಾಹನ ಸವಾರರು ಪರದಾಟ ನಡೆಸುವಂತಾಯಿತು.