ಮೆಸ್ಕಾಂ ಉದ್ಯೋಗಿ ಹೃದಯಾಘಾತಕ್ಕೊಳಗಾಗಿ ಮೃತ್ಯು
Wednesday, June 10, 2026
ಬಂಟ್ವಾಳ: ಕರ್ತವ್ಯದಲ್ಲಿದ್ದಾಗಲೇ ಮೆಸ್ಕಾಂ ಉದ್ಯೋಗಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಶಂಭೂರು ಎಂಬಲ್ಲಿ ನಡೆದಿದೆ.
ಮೂಲತಃ ಮಿತ್ತೂರು ನಿವಾಸಿ ಚಂದ್ರಶೇಖರ ನಾಯ್ಕ (55) ಮೃತಪಟ್ಟವರಾದ್ದಾರೆ.
ಮೆಸ್ಕಾಂ ಪಾಣೆಮಂಗಳೂರು ಶಾಖೆಯಲ್ಲಿ ಸಹಾಯಕ ಮ್ಯಾಕಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಬುಧವಾರ ಮಧ್ಯಾಹ್ನ ಶಂಭೂರು ಸಮೀಪದ ಕುಂದಾಯಗೋಳಿ ಎಂಬಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯುತ್ ತಂತಿಗಳನ್ನು ಎಳೆದು ಸಂಪರ್ಕ ಕಲ್ಪಿಸಿದ್ದರು. ಬಳಿಕ ಇಲ್ಲಿಂದ ವಿದ್ಯುತ್ ಸಮಸ್ಯೆಗೆ ಕರೆ ಬಂದ ಕಾರಣ ಸಹದ್ಯೋಗಿ ಸಿಬ್ಬಂದಿ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕುಂದಾಯಗೋಳಿ ಎಂಬಲ್ಲಿ ಕೆಳಗೆ ಬಿದ್ದಿದ್ದಾರೆ.
ಕೂಡಲೇ ಅವರನ್ನು ಬಿ.ಸಿ. ರೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಇವರನ್ನು ಪರೀಕ್ಷಿಸಿದ ವೈದ್ಯರು ಚಂದ್ರಶೇಖರ್ ಅವರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಖಚಿತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಇಬ್ಬರು ಪುತ್ರರ ಸಹಿತ ಬಂಧು ಮಿತ್ರರನ್ನು ಅಗಲಿದ್ದಾರೆ.