ವಾರೀಸದಾರರು ಸಂಬಂಧವಿಲ್ಲ ಅಂದರೂ ಶವ ಇನ್ನೂ ಶವಗಾದಲ್ಲಿದೆ!
ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ ಮತ್ತು ಪ.ಪಂ.ದ ಈ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡ ಸತೀಶ್ ಅರಳ ಅವರು ವಿಷಯ ಪ್ರಸ್ತಾವಿಸಿ ಪೊಳಲಿ ದೇವಸ್ಥಾನ ಪಂಪ್ ಶೆಡ್‌ನಲ್ಲಿ ಕಳೆದ ಮಂಗಳವಾರ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಬಳಿಕ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿತ್ತು. ಮಾಹಿತಿ ಪಡೆದ ವ್ಯಕ್ತಿಯ ವಾರೀಸುದಾರರು ತನ್ನನ್ನು ಸಂಪರ್ಕಿಸಿ, ಮೃತ ವ್ಯಕ್ತಿಗೂ ನಮಗೂ ಯಾವುದೇ ಸಂಬಂಧವಿಲ್ಲ, ಅವರು ಮನೆಬಿಟ್ಡು ಹಲವು ವರ್ಷಗಳೇ ಸಂದಿವೆ. ನಮ್ಮ ಕುಟುಂಬ ಮತ್ತು ಮನೆಯಿಂದಲು ಆ ವ್ಯಕ್ತಿಯನ್ನುಬಿಟ್ಟು ಬಿಟ್ಟಿದ್ದೆವೆ ಎಂದು ಅತನ ಮನೆಮಂದಿ ಹೇಳಿಕೆ ನೀಡಿದ್ದು, ಪೊಲೀಸರ ಮುಂದೆಯು ತಿಳಿಸಲಾಗಿತ್ತು. ಮೃತ ವ್ಯಕ್ತಿಯ ಮನೆಯವರ ಹೇಳಿಕೆಯನ್ನಾಧರಿಸಿ ಶವವನ್ನು ಪೊಲೀಸರೇ ವಿಲೇ ಮಾಡಬಹುದಿತ್ತು. ಹೀಗಿದ್ದು ಆ ಶವವನ್ನು ಕಳೆದ ಆರು ದಿನಗಳಿಂದ ಶವಗಾರದಲ್ಲಿ ಹಾಗೆ ಇರಿಸಲಾಗಿದ್ದು, ಹೀಗೂ ಒಂದು ವ್ಯವಸ್ಥೆ ಇದೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಂಜುನಾಥ್ ಸಭೆ ಮುಗಿದಾಕ್ಷಣ ಸಂಬಂಧಿಸಿದ ಠಾಣಾ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ಶವದ ವಿಲೇಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ದೌರ್ಜನ್ಯ ಇನ್ನುನಿಂತಿಲ್ಲ:
ಬುದ್ದಿವಂತರ ಜಿಲ್ಲೆಯೆಂದು ಪರಿಗಣಿಸಿರುವ ದ.ಕ. ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಇನ್ನು ಕಡಿವಾಣ ಬಿದ್ದಿಲ್ಲ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿಗಳ, ತಾಲೂಕುಮಟ್ಟದಲ್ಲಿ ಎಸ್ಸಿ-ಎಸ್ಟಿ ಸಮುದಾಯದ ಕುಂದುಕೊರತೆ ಸಭೆಗಳು ನಡೆಯುತ್ತವೆ. ನಮ್ಮ ಸಮಸ್ಯೆಗಳನ್ನು ಪ್ರಸ್ತಾಪ ಮಾಡುತ್ತೆವೆ. ಆದರೆ ಅದಕ್ಕೊಂದು ಸಮರ್ಪಕ ಪರಿಹಾರ ಸಿಗುತ್ತಿಲ್ಲ, ದಲಿತರ ಮೇಲಿನ ದೌರ್ಜನ್ಯಗಳು ಮಾತ್ರ ಇನ್ನು ಮುಂದುವರಿಯುತ್ತಲೇ ಇವೆ ಎಂದು ಸತೀಶ್ ಅರಳ ಕಳವಳ ವ್ಯಕ್ತಪಡಿಸಿದರು.
ಇತ್ತೀಚಿಗಿನ ದಿನಗಳಲ್ಲಿ ಜಿಲ್ಲಾ, ತಾಲೂಕುಮಟ್ಟದ ಕುಂದುಕೊರತೆ ಸಭೆಗಳು ಕೇವಲ ಕಾಟಾಚಾರಕ್ಕೆಂಬಂತೆ ನಡೆಯುತ್ತಿದೆ. ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಸಭೆ ನಡೆಸಿ ಏನು ಪ್ರಯೋಜನ ಎಂದು ಅಧಿಕಾರಿಗಳ ಗಮನಸೆಳೆದರು. ಈ ಪ್ರಶ್ನೆಗೆ ತಹಶೀಲ್ದಾರರು ನಿರುತ್ತರರಾದರು.
ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಕೊಡುಗೆ:
ಬಂಟ್ವಾಳ ತಾಲೂಕಿಗೆ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 97.87 ಶೇ.ಫಲಿತಾಂಶ ಬಂದಿದ್ದು, ಇದರಲ್ಲಿ ಎಸ್ಸಿ-ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ಕೂಡ ಮುಂಚೂಣಿಯಲ್ಲಿದ್ದು, ಉತ್ತಮ ಫಲಿತಾಂಶದಲ್ಲಿ ಅವರ ಕೊಡುಗೆಯ ಇದೆ ಎಂದು ಶಿಕ್ಷಣ ಇಲಾಖಾಧಿಕಾರಿ ಸಭೆಯ ಗಮನಕ್ಕೆ ತಂದರು. ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳಿಗೂ ಒಂದನೇ ಹಂತದಲ್ಲಿ ಸಮವಸ್ತ್ರ, ಪಠ್ಯ ಪುಸ್ತಕ ವಿತರಿಸಲಾಗಿದ್ದು, ಎರಡನೇ ಹಂತದ ಸಮವಸ್ತ್ರ, ಪಠ್ಯಪುಸ್ತಕ ವಿತರಣೆಯನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು, ಸರಕಾರಿ ಶಾಲೆಗಳಿಗೆ ಸರಕಾರದಿಂದ ಇವೆಲ್ಲಾವನ್ನು ಉಚಿತವಾಗಿಯೇ ನೀಡಲಾಗುತ್ತಿದೆ. ಹಣ ಪಡೆಯುತ್ತಿದ್ದರೆ ನಿರ್ಧಿಷ್ಠ ಶಾಲೆಯ ವಿರುದ್ಧ ಲಿಖಿತ ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ದಲಿತ ಮುಖಂಡ ವಿಶ್ವನಾಥ ಚಂಡ್ತಿಮಾರ್ ಅವರ ಪ್ರಶ್ನೆಗೆ ಅಧಿಕಾರಿ ಉತ್ತರಿಸಿದರು.
ವರ್ಷಕ್ಕೆ ಎರಡೇ ಸಭೆ:
ಒಂದು ವರ್ಷಕ್ಕೆ 12 ತಿಂಗಳಿದ್ದು, ಪ್ರತಿಮೂರು ತಿಂಗಳಿಗೊಮ್ಮೆ ಎಸ್ಸಿ-ಎಸ್ಟಿ ಸಮುದಾಯದ ಕುಂದುಕೊರತೆ ಸಭೆ ಕರೆದು ಸಮಸ್ಯೆ ಅಲಿಸಿ ಪರಿಹಾರ ನೀಡಬೇಕೆಂಬ ನಿಯಮವಿದ್ದರೂ ಬಂಟ್ವಾಳ ತಾಲೂಕಿಮಲ್ಲಿ ಮಾತ್ರ ಆರು ತಿಂಗಳಿಗೊಮ್ಮೆ ವರ್ಷಕ್ಕೆ ಎರಡೇ ಸಭೆ ನಡೆಸಲಾಗುತ್ತಿದೆ. ಅದಕ್ಕು ತಾಲೂಕು ಮಟ್ಟದ ಕೆಲ ಅಧಿಕಾರಿಗಳು ಗೈರುಹಾಜರಾಗುತ್ತಾರೆ ಹಾಗಾದರೆ ನಮ್ಮ ಸಮಸ್ಯೆಗೆ ಪರಿಹಾರ ಹೇಗೆ ಸಿಗಲು ಸಾಧ್ಯ ಎಂದು ಗಂಗಾಧರ ಪರಾರಿ ಪ್ರಶ್ನಿಸಿದರು. ಗೈರು ಹಾಜರಾದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸುವಂತೆ ತಹಶೀಲ್ದಾರ್ ಮಂಜುನಾಥ್ ಸೂಚಿಸಿದರಲ್ಲದೆ ಮುಂದಕ್ಕೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.
ಕಳಪೆ ಕಾಮಗಾರಿ:
ಬಂಟ್ವಾಳ ಬಡ್ಡಕಟ್ಟೆಯಲ್ಲಿರುವ ಹಿಂದೂ ರುದ್ರಭೂಮಿ ಸಮೀಪವೇ ಮತ್ತೊಂದು ಕಟ್ಟಡ ನಿರ್ಮಾಣವಾಗುತ್ತಿದ್ದು,ಇದು ತೀರಾ ಕಳಪೆ ಗುಣಮಟ್ಟದಿಂದ ಕೂಡಿದೆ. ಇದನ್ನು ಯಾವ ಅನುದಾನದಲ್ಲಿ ಮಾಡಲಾಗುತ್ತಿದೆ. ಯಾರಿಗೆ ಟೆಂಡರ್ ಆಗಿದೆ.ಕಾಮಗಾರಿಯನ್ನು ತಕ್ಷಣ ಸ್ಥಗಿಗೊಳಿಸಬೇಕು ಗುತ್ತಿಗೆದಾರನ್ನು ಕರೆಸಿ ವಿಚಾರಿಸಬೇಕು ಈ ಸಂದರ್ಭ ತನ್ನನ್ನುಕೂಡ ಆಹ್ವಾನಿಸಬೇಕು ಎಂದು ಮೋಹನ್ ಚಂಡ್ತಿಮಾರ್ ಪುರಸಭಾ ಮುಖ್ಯಾಧಿಕಾರಿಯವರ ಗಮನಸೆಳೆದರು.
ನಗರೋತ್ಥಾನ ಯೋಜನೆಯ ಅನುದಾನದಿಂದ ಕಾಮಗಾರಿ ನಡೆಯುತ್ತಿರಬೇಕು ಈ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಾಧಿಕಾರಿ ತೀತರ್ರಪ್ರಸಾದ್ ಹೇಳಿದರು.
ಸರಕಾರಿ ಬಾವಿಗೆ ಬೇಲಿ:
ಪಲ್ಲಮಜಲು ಬಳಿ ಸರಕಾರಿ ಬಾವಿಗೆ ಬೇಲಿ ಹಾಕಿ ಗೇಟ್ ಅಳವಡಿಸಲಾಗಿದೆ. ಪಂಪ್ ಹಾಕಿ ನೀರು ಎತ್ತಲಾಗುತ್ತಿದೆ. ಉಳ್ಳವರು ಈ ರೀತಿ ಯಾರು ಕ್ರಮಕ್ಕೆ ಮುಂದಾಗುತ್ತಿಲ್ಲ, ಬಡಪಾಯಿ ಹೀಗೆ ಮಾಡುತ್ತಿದ್ದರೆ ಅಧಿಕಾರಿಗಳು ಬಿಡುತ್ತಿದ್ದರೆ,ಇದನ್ನು ತೆರವುಗೊಳಿಸಬೇಕು ಹಾಗೂ ಇದೇ ಪರಿಸರದಲ್ಲಿ ಸರಕಾರಿ ಜಮೀನಿನಲ್ಲಿ ಮರವನ್ನು ಕಡಿದು ಹಾಕಲಾಗಿದ್ದು, ಅದನ್ನು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಲಾಗುತ್ತಿದೆ. ಈ ಮರವನ್ನು ಅರಣ್ಯ ಇಲಾಖೆ ಮುಟ್ಟುಗೋಲು ಹಾಕಬೇಕು ಎಂದು ಗಂಗಾಧರ ಪರಾರಿ ಸಭೆಯ ಗಮನಸೆಳೆದರು.
ಸರಕಾರಿ ಬಸ್‌ನಲ್ಲಿ 130 ಪ್ರಯಾಣಿಕರು:
ಸರಕಾರಿ ಬಸ್‌ಗಳಲ್ಲಿ ವಾಸ್ತವವಾಗಿ 50 ರಿಂದ 60 ಪ್ರಯಾಣಿಕರನ್ನು ತುಂಬಿಸಬಹುದು,ಆದರೆ ಧರ್ಮಸ್ಥಳ ರೂಟಿನಲ್ಲಿ ಸಂಚರಿಸುವ ಬಸ್‌ಗಳಲ್ಲಿ 130 ರಿಂದ 150 ಪ್ರಯಾಣಿಕರನ್ನು ಹೇರಿಕೊಂಡು ಸಂಚರಿಸುತ್ತಿದೆ.ಅನಾಹುತ ಸಂಭವಿಸಿದರೆ ಬಸ್ ಚಾಲಕನ ಮೇಲೆ ಪ್ರಕರಣ ದಾಖಲಾಗುತ್ತದೆ. ಖಾಸಗಿ ಬಸ್, ಆಟೋರಿಕ್ಷಾ, ಇನ್ನಿತರ ವಾಹನಗಳನ್ನು ತಡೆದು ದಂಡ ವಸೂಲಿ ಮಾಡುವ ಪೊಲೀಸರಾಗಲೀ, ಆರ್‌ಟಿಒ ಇಲಾಖೆಯಾಗಲೀ ಓವರ್ ಲೋಡು ಹಾಕಿ ಅಪಾಯಕಾರಿಯಾಗಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಯಾಕೆ ದಂಡ ಹಾಕುತ್ತಿಲ್ಲ ಎಂದು ವಿಶ್ವನಾಥ ಚಂಡ್ತಿಮಾರ್ ಪ್ರಶ್ನಿಸಿದರು. ಹಾಗಾಗಿ ಹೆಚ್ಚುವರಿ ಬಸ್‌ಗಳನ್ನು ಈ ರೂಟಿನಲ್ಲಿ ಓಡಿಸುವಂತೆ ಅವರು ಆಗ್ರಹಿಸಿದರು. ಅದೇ ರೀತಿ ಸರಪಾಡಿ ರೂಟಿನಲ್ಲಿ ಪ್ರತಿ ದಿನ ರಾತ್ರಿ 8 ಗಂಟೆಯ ಬಸ್ ಸಂಚಾರವನ್ನು ನಿಲುಗಡೆಗೊಳಿಸದಂತೆಯು ಕೋರಿದರು.
ಇದೇ ವೇಳೆ ತೋರಣಕಟ್ಟೆ-ಕುದ್ದುಪದವು-ವಿಟ್ಲ-ಮಂಗಳೂರಿಗೆ ತೆರಳುವ ವಿದ್ಯಾರ್ಥಿಗಳು, ಕಾರ್ಮಿಕರು ಸಹಿತ ಅನೇಕ ಮಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗ್ಗೆ ಮತ್ತೆ ಸಂಜೆಯ ಪೀಕ್ ಅವರ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಓಡಿಸುವಂತೆ ಕಳೆದ ಎರಡು ಸಭೆಯಲ್ಲಿಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ದಲಿತ ಮುಖಂಡರೋರ್ವರು ದೂರಿದರು.
ಡಿ.ಸಿ. ಮನ್ನಾ ಜಮೀನಿನ ಕುರಿತಂತೆ ಒತ್ತುವರಿಯಾಗಿರುವುದು, ಉಳಿಕೆಯಾದವು ಸೇರಿದಂತೆ ಒಟ್ಟಾರೆ ಎಷ್ಟು ಜಮೀನು ಲಭ್ಯವಿದೆ ಸಂಪೂರ್ಣ ವಿವರವನ್ನು ಮುಂದಿನ ಸಭೆಗೆ ಮಂಡಿಸುವುದಾಗಿ ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.
ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ಎಸ್ಸಿ-ಎಸ್ಟಿ ಸಮುದಾಯಕ್ಕೆ ಸರಕಾರದಿಂದ ಸಿಗುವಂತ ಸವಲತ್ತುಗಳ ಮಾಹಿತಿ ನೀಡಿದರೆ, ಸವಲತ್ತಿನ ಕುರಿತಂತೆ ಅಧಿಕಾರಿಗಳನ್ನು ಸಂಪರ್ಕಿಸಿ ಇನ್ನಷ್ಟು ಮಾಹಿತಿ ಪಡೆದು ಅದರ ಸದುಪಯೋಗ ಪಡೆಯುವಂತೆ ತಹಶೀಲ್ದಾರ್ ಮಂಜುನಾಥ್ ಸೂಚಿಸಿದರು.
ತಾ.ಪ. ಇಒ ಸಚ್ಚಿನ್ ಕುಮಾರ್, ಮುಖ್ಯಾಧಿಕಾರಿ ತೀರ್ಥಪ್ರಸಾದ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ (ಗ್ರೇಡ್-2) ವಿನಯಕುಮಾರಿ ಸ್ವಾಗತಿಸಿ, ವಂದಿಸಿದರು.