ಕರ್ನಾಟಕದ ಹೆಮ್ಮೆಯ ಗಾಯಕಿ ಮಹಾಲಕ್ಷ್ಮಿ ಶೆಣೈ ಅವರಿಗೆ ಪ್ರತಿಷ್ಠಿತ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ–2024: ಹಿಂದೂಸ್ತಾನಿ ಗಾಯನ ಕ್ಷೇತ್ರದಲ್ಲಿ ರಾಷ್ಟ್ರದ ಅತ್ಯುನ್ನತ ಯುವ ಗೌರವಕ್ಕೆ ಭಾಜನ
ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಸಂಗೀತ, ನೃತ್ಯ ಹಾಗೂ ನಾಟಕ ಕ್ಷೇತ್ರದ ರಾಷ್ಟ್ರೀಯ ಅಕಾಡೆಮಿಯಾದ ಸಂಗೀತ ನಾಟಕ ಅಕಾಡೆಮಿಯು 2024 ಹಾಗೂ 2025ನೇ ಸಾಲಿನ ಅಕಾಡೆಮಿ ರತ್ನ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪುರಸ್ಕೃತರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಅದರಲ್ಲಿ ಮಹಾಲಕ್ಷ್ಮಿ ಶೆಣೈ ಅವರ ಹೆಸರು ಸ್ಥಾನ ಪಡೆದಿದೆ.
ಅವರು ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಹಿಂದೂಸ್ತಾನಿ ಸಂಗೀತ ವಿದ್ವಾಂಸ ಪಂಡಿತ್ ವಿಶ್ವಮೋಹನ್ ಭಟ್ ಅವರ ಪ್ರಮುಖ ಶಿಷ್ಯೆಯಾಗಿ ಗುರು-ಶಿಷ್ಯ ಪರಂಪರೆಯ ಉಜ್ವಲ ಪ್ರತಿನಿಧಿಯಾಗಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತದ ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಅವರ ಕೊಡುಗೆ ಗಮನಾರ್ಹವಾಗಿದೆ.
ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಸ್ಮರಣಾರ್ಥ ಸ್ಥಾಪಿಸಲಾದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವು ದೇಶದ ಯುವ ಕಲಾವಿದರಿಗೆ ನೀಡಲಾಗುವ ಅತ್ಯುನ್ನತ ರಾಷ್ಟ್ರೀಯ ಗೌರವಗಳಲ್ಲಿ ಒಂದಾಗಿದ್ದು, ಸಂಗೀತ, ನೃತ್ಯ ಮತ್ತು ನಾಟಕ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ಹಾಗೂ ಸಾಧನೆ ತೋರಿದ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ.
ಮಹಾಲಕ್ಷ್ಮಿ ಶೆಣೈ ಅವರ ಈ ಸಾಧನೆ ಕರ್ನಾಟಕಕ್ಕೆ, ವಿಶೇಷವಾಗಿ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರ ಈ ರಾಷ್ಟ್ರೀಯ ಗೌರವವು ರಾಜ್ಯದ ಹಿಂದೂಸ್ತಾನಿ ಸಂಗೀತ ಪರಂಪರೆಯ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಾಗಿದೆ.
