ದಕ್ಷಿಣ ಕನ್ನಡ, ಉಡುಪಿಯಲ್ಲಿ ದಿನಪೂರ್ತಿ ಮೋಡ ಕವಿದ ವಾತಾವರಣ

ದಕ್ಷಿಣ ಕನ್ನಡ, ಉಡುಪಿಯಲ್ಲಿ ದಿನಪೂರ್ತಿ ಮೋಡ ಕವಿದ ವಾತಾವರಣ

ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವರುಣನ ಆರ್ಭಟಕ್ಕೆ ತುಸು ವಿರಾಮ ಬಿದ್ದಿದೆ. ಭಾನುವಾರ ದಿನಪೂರ್ತಿ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.

ದಿನಪೂರ್ತಿ ಮಿಶ್ರ ವಾತಾವರಣವಿದ್ದ ಕರಾವಳಿ ಸಂಜೆಯಾಗುತ್ತಿದ್ದಂತೆ ಕಡಬ, ಬೆಳ್ತಂಗಡಿ, ಧರ್ಮಸ್ಥಳ ಹಾಗೂ ಚಾರ್ಮಡಿ ಘಾಟ್ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾದಾರಣ ಮಳೆಯಾಗಿರುವುದು ವರದಿಯಾಗಿದೆ. ಶನಿವಾರ ಬೆಳಗ್ಗಿನಿಂದ ಭಾನುವಾರ ಬೆಳಗ್ಗಿನವರೆಗಿನ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸರಾಸರಿ 23.9 ಮಿಮೀ ಮಳೆ ದಾಖಲಾಗಿದೆ. ಶನಿವಾರ ಬೆಳಗ್ಗಿನಿಂದ ಭಾನುವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 23.9 ಮಿಮೀ ಮಳೆ ದಾಖಲಾಗಿದೆ. ಬೆಳ್ತಂಗಡಿಯಲ್ಲಿ 19.9 ಮಿಮೀ, ಬಂಟ್ವಾಳದಲ್ಲಿ 17.1 ಮಿಮೀ, ಮಂಗಳೂರು 25 ಮಿಮೀ, ಪುತ್ತೂರು 22.7 ಮಿಮೀ, ಸುಳ್ಯ 26.8 ಮಿಮೀ, ಮೂಡುಬಿದಿರೆ 13.8 ಮಿಮೀ, ಉಳ್ಳಾಲದಲ್ಲಿ 23.2 ಮಿಮೀ ಮಳೆಯಾಗಿದೆ.

ಮಳೆ ಮುನ್ಸೂಚನೆ:

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ದಿನದ ಅವಧಿಯಲ್ಲಿ ಒಂದೆರಡು ಬಾರಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಆದರೆ, ಕರಾವಳಿ ತೀರ ಭಾಗಗಳಲ್ಲಿ ಸಂಜೆ ಮತ್ತು ರಾತ್ರಿಯ ವೇಳೆಗೆ ಮಳೆ ಮತ್ತಷ್ಟು ಬಿರುಸುಕೊಳ್ಳಲಿದ್ದು, ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಚಾರ್ಮಡಿ ಘಾಟ್ ಹಾಗೂ ಘಾಟ್ ಭಾಗದ ರಸ್ತೆಗಳಲ್ಲಿ ಸಂಜೆ ವೇಳೆ ಮಳೆಯೊಂದಿಗೆ ದಟ್ಟ ಮಂಜು ಕವಿಯುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಜಾಗರೂಕರಾಗಿ ಚಲಿಸುವಂತೆ ಸೂಚಿಸಲಾಗಿದೆ.

ಜೂನ್ 14ರ ವರೆಗೆ ಉತ್ತಮ ಮಳೆ ಮುನ್ಸೂಚನೆ:

ಕರಾವಳಿ ಜನತೆಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 8ರಿಂದ ಮುಂಗಾರು ಮಾರುತಗಳು ಮತ್ತಷ್ಟು ಚುರುಕಾಗಲಿದ್ದು, ಜೂನ್ 14ರ ತನಕ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುವ ಎಲ್ಲಾ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಸ್ತುತ ಅರಬ್ಬಿ ಸಮುದ್ರದ ರಾಜ್ಯದ ಕರಾವಳಿ ತೀರ ಭಾಗದಲ್ಲಿ ಮಧ್ಯಮ ಸ್ತರದ ಗಾಳಿಯ ತಿರುಗುವಿಕೆ ಉಂಟಾಗಿದೆ. 

ಇದು ಮುಂಗಾರು ಮಾರುತಗಳ ವಿರುದ್ಧ ದಿಕ್ಕಿಗೆ ಬೀಸುತ್ತಿರುವುದರಿಂದ, ಸದ್ಯಕ್ಕೆ ಕರಾವಳಿಯಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆಗಳು ಕ್ಷೀಣಿಸಿವೆ. ಆದಾಗ್ಯೂ, ವಾತಾವರಣದಲ್ಲಿನ ಈ ಬದಲಾವಣೆಯಿಂದಾಗಿ ಇಡೀ ವಾರ ಕರಾವಳಿಯಾದ್ಯಂತ ಉತ್ತಮ ಹಾಗೂ ಸ್ಥಿರವಾದ ಮಳೆ ಮುಂದುವರಿಯಲಿದೆ. ಸದ್ಯ ಸಮುದ್ರದಲ್ಲಿ ಉಂಟಾಗಿರುವ ಗಾಳಿಯ ತಿರುಗುವಿಕೆ ಪ್ರಕ್ರಿಯೆಯು ಮುಂದಿನ ಕೆಲವು ದಿನಗಳಲ್ಲಿ ಶಿಥಿಲಗೊಳ್ಳಲಿದೆ. ಇದು ದುರ್ಬಲಗೊಳ್ಳುತ್ತಿದ್ದಂತೆಯೇ ಮುಂಗಾರು ಮಾರುತಗಳು ಕರಾವಳಿ ಭಾಗದಲ್ಲಿ ಮತ್ತಷ್ಟು ಬಲಗೊಂಡು, ಜೂನ್ ಎರಡನೇ ವಾರದಲ್ಲಿ ಮಳೆ ಇನ್ನಷ್ಟು ಬಿರುಸುಕೊಳ್ಳುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article