ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯಾಪರ ವಲಯಕ್ಕೆ ಆಮ್ ಆದ್ಮಿ ಪಕ್ಷ ಆಗ್ರಹ

ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯಾಪರ ವಲಯಕ್ಕೆ ಆಮ್ ಆದ್ಮಿ ಪಕ್ಷ ಆಗ್ರಹ


ಮಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ವಿಲವಾಗಿದೆ. ಪಾಲಿಕೆ ಹಾಗೂ ಜಿಲ್ಲಾಡಳಿತ ತಕ್ಷಣ ಸ್ಪಂದಿಸಿ ಪ್ರತ್ಯೇಕ ಬೀದಿಬದಿ ವ್ಯಾಪಾರ ವಲಯ ಗುರುತಿಸಿ ಪರವಾನಿಗೆ ನೀಡಬೇಕು. ಅರ್ಹ ವ್ಯಾಪಾರಿಗಳಿಗೆ ಅನ್ಯಾಯವಾಗದಂತೆ ಕ್ರಮ ವಹಿಸಬೇಕು ಎಂದು ಆಮ್ ಆದ್ಮಿ ಪಕ್ಷ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಗ್ರಹಿಸಿದೆ.

ಬೀದಿ ಬದಿ ವ್ಯಾಪಾರಿಗಳು ನಮ್ಮ ನಗರದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭವಾಗಿದ್ದಾರೆ. ಕೇಂದ್ರ ಸರಕಾರ ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಅವರನ್ನು ಸಬಲೀಕರಣಗೊಳಿಸಲು ಉತ್ತೇಜನ ನೀಡುತ್ತಿದೆ. ಆದರೆ, ಸೂಕ್ತ ವ್ಯಾಪಾರ ವಲಯಗಳನ್ನು ಗುರುತಿಸುವಲ್ಲಿ ವಿಲವಾಗಿರುವ ಮಂಗಳೂರು ಮಹಾನಗರ ಪಾಲಿಕೆಯು, ನಗರದ ಬಡವರ ಸಂಪಾದನೆಯ ಅವಕಾಶಗಳನ್ನು ನೇರವಾಗಿ ಕಸಿದುಕೊಂಡಿದೆ ಎಂದು ಆಪ್ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. 

ಬೀದಿಬದಿ ವ್ಯಾಪಾರಿಗಳ ಕಾಯ್ದೆಯು ವ್ಯಾಪಾರ ವಲಯಗಳನ್ನು ಗುರುತಿಸಲು ಮತ್ತು ಬಯೋಮೆಟ್ರಿಕ್ ಪರವಾನಿಗಳನ್ನು ನೀಡಲು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ಆದರೆ, ಪಾಲಿಕೆ ಅಧಿಕಾರಿಗಳ ಅಸಮರ್ಥತೆಯಿಂದ ಈ ಪ್ರಕ್ರಿಯೆಯು ಸಂಪೂರ್ಣವಾಗಿ ನನೆಗುದಿಗೆ ಬಿದ್ದಿದೆ. ವ್ಯಾಪಾರಿಗಳ ಏಳಿಗೆಗಾಗಿ ಇರುವ ಕೇಂದ್ರ ಸರಕಾರದ ಹಣಕಾಸು ಯೋಜನೆಗಳು ಸ್ಥಳೀಯವಾಗಿ ಅನುಷ್ಠಾನಗೊಳ್ಳದೆ ಹಾಗೇ ಉಳಿದುಕೊಂಡಿದ್ದು, ಪಾಲಿಕೆ ತತ್ ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಪಕ್ಷವು ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಿದ್ದು, ಈಗಾಗಲೇ 22 ದೂರುಗಳನ್ನು ಸ್ವೀಕರಿಸಲಾಗಿದೆ. ರಸ್ತೆ ಗುಂಡಿ, ಒಳಚರಂಡಿಗೆ ಸಂಬಂಧಿಸಿದ ದೂರುಗಳೇ ಅಧಿಕವಾಗಿದ್ದು, ಖಾಸಗಿ ವಿಚಾರಗಳಿದ್ದರೆ ಪಕ್ಷ ಅದರಲ್ಲಿ ಸೇರಿಕೊಳ್ಳುವುದಿಲ್ಲ ಎಂದರು. 

ಬೀದಿಬದಿ ವ್ಯಾಪಾರಸ್ಥರ ಯೂನಿಯನ್ ಮಾಡಿ ಅವರಿಂದ 50 ರೂ., 20 ರೂ. ಸಂಗ್ರಹಿಸುವುದು ಸರಿಯಲ್ಲ. ಹೊರಗಿನಿಂದ ಮಂಗಳೂರಿಗೆ ವ್ಯಾಪಾರಕ್ಕೆ ಆಗಮಿಸುವವರಿಗೆ ಗೌರವ ನೀಡಿ, ಕಾನೂನು ಮೂಲಕ ಅವರಿಗೆ ಪರವಾನಿಗೆ ಒದಗಿಸಬೇಕು ಎಂದು ವಿವೇಕಾನಂದ ಸಾಲಿನ್ಸ್ ಹೇಳಿದರು. 

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೊ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮಡಿವಾಳ, ಪ್ರಮುಖರಾದ ಕಬೀರ್ ಕಾಟಿಪಳ್ಳ, ಶಾಲೆಟ್ ಪಿಂಟೊ, ಸುಜಾತಾ ಯತೀಶ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article