ಸರ್ಕಾರಿ ವೆನ್ಲಾಕ್ ಆಸ್ಪತ್ರೆ: ಸಾವಿರ ಹೃದಯ ಚಿಕಿತ್ಸೆ
ಕರಾವಳಿ ಕರ್ನಾಟಕ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಉನ್ನತ ಮಟ್ಟದ ಹೃದಯ ಚಿಕಿತ್ಸೆ ಒದಗಿಸುವಲ್ಲಿ ವೆನ್ಲಾಕ್‌ನಲ್ಲಿ ಈ ಕ್ಯಾಥ್ ಲ್ಯಾಬ್ ಯಶಸ್ವಿಯಾಗಿದೆ. ಈ ಸೌಲಭ್ಯ ಆರಂಭಕ್ಕೂ ಮೊದಲು, ಹೃದಯದ ಸಮಸ್ಯೆ ಸಂಬಂಧಿಸಿ ತುರ್ತು ಸ್ಥಿತಿಯಲ್ಲಿದ್ದ ರೋಗಿಗಳು ದೂರದ ಆಸ್ಪತ್ರೆಗಳಿಗೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾಗುತ್ತಿತ್ತು. ರೋಗಿಯ ಆರ್ಥಿಕ ಸ್ಥಿತಿ ಯಾವುದೇ ಇರಲಿ, ಸಮಯೋಚಿತ, ಕೈಗೆಟುಕುವ ಮತ್ತು ವಿಶ್ವಮಟ್ಟದ ಹೃದಯ ಚಿಕಿತ್ಸೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿತ್ತು
ವೆನ್ಲಾಕ್ ಅತ್ಯಾಧುನಿಕ ಕ್ಯಾಥ್ ಲ್ಯಾಬ್‌ನಲ್ಲಿ ಸರಕಾರಿ ವೈದ್ಯರು ಮತ್ತು ಕೆಎಂಸಿಯ ತಜ್ಞರು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಉನ್ನತ ಮಟ್ಟದ ಹೃದಯ ಚಿಕಿತ್ಸೆಗಳು ಕಡಿಮೆ ವೆಚ್ಚದಲ್ಲಿ ಲಭ್ಯವಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಜೀವ ರಕ್ಷಕ ಚಿಕಿತ್ಸೆಗಳು ದೊರೆಯುತ್ತಿವೆ. ಬಿಪಿಎಲ್ ಫಲಾನುಭವಿಗಳಿಗೆ ಕೊರೋನರಿ ಅಂಜಿಯೋಗ್ರಫಿ ಸಂಪೂರ್ಣ ಉಚಿತವಾಗಿದೆ. ಆಯುಷ್ಮಾನ್ ಭಾರತ್ ಮುಂತಾದ ಸರ್ಕಾರಿ ಯೋಜನೆಗಳು ಹೆಚ್ಚಿನ ಜನರಿಗೆ ಈ ಸೇವೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಿವೆ.
ಕೊರೋನರಿ ಅಂಜಿಯೋಗ್ರಫಿ, ಪ್ರೈಮರಿ ಅಂಜಿಯೋಪ್ಲಾಸ್ಟಿ, ಆಯ್ಕೆಯ ಅಂಜಿಯೋಪ್ಲಾಸ್ಟಿ, ಸಂಕೀರ್ಣ ಕೊರೋನರಿ ಮಧ್ಯಸ್ಥಿಕೆಗಳು, ಕ್ರಾನಿಕ್ ಟೋಟಲ್ ಅಕ್ಯೂಷನ್ ಚಿಕಿತ್ಸೆ, ತೀವ್ರ ಹೃದಯಾಘಾತದ ನಿರ್ವಹಣೆ, ತಾತ್ಕಾಲಿಕ ಪೇಸ್ ಮೇಕರ್ ಅಳವಡಿಕೆ, ತುರ್ತು ಕೊರೋನರಿ ಮಧ್ಯಸ್ಥಿಕೆಗಳು ಸಹಿತ ತುರ್ತು ಹೃದಯ ಸೇವೆಗಳನ್ನು ಇಲ್ಲಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.