ಹಸಿವು, ಬಡತನ, ದಾರಿದ್ರ್ಯ, ನಿರುದ್ಯೋಗ ಮುಕ್ತ ಸಮಾಜದ ನಿರ್ಮಾಣ ಕಮ್ಯುನಿಸ್ಟ್ ಸಿದ್ದಾಂತದಿಂದ ಮಾತ್ರ ಸಾಧ್ಯ: ಕೃಷ್ಣಪ್ಪ ಸಾಲ್ಯಾನ್
Sunday, June 7, 2026
ಮಂಗಳೂರು: ಸಮಾಜವಾದಿ ವ್ಯವಸ್ಥೆಯಡಿಯಲ್ಲಿ ಕಳೆದ 8 ದಶಕಗಳಿಂದ ಮುನ್ನಡೆಯುತ್ತಿರುವ ಚೈನಾ ದೇಶವು ಆರ್ಥಿಕ, ಸಾಮಾಜಿಕ ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಭಾರೀ ಮುನ್ನಡೆ ಸಾಧಿಸಿದೆ. ಜಗತ್ತಿಗೆ ತಾನೇ ದೊಡ್ಡಣ್ಣನಂತೆ ವರ್ತಿಸುವ ಅಮೇರಿಕಾವನ್ನೂ ಮೀರಿ ಅಭಿವೃದ್ಧಿಯ ನಾಗಾಲೋಟದಲ್ಲಿ ಸಾಗುತ್ತಿದೆ. ಸಮಾಜವಾದಿ ಪುಟ್ಟ ರಾಷ್ಟ್ರ ಕ್ಯೂಬಾ ಕೊರೋನಾ ಸಂದರ್ಭದಲ್ಲಿ ಅಮೇರಿಕಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಿಗೆ ವೈದ್ಯರನ್ನು ಕಳುಹಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಮಾಡಿದೆ.ಇತರ ಸಮಾಜವಾದಿ ರಾಷ್ಟ್ರಗಳಾದ ವಿಯೆಟ್ನಾಂ, ಉತ್ತರ ಕೊರಿಯಾ ಲಾವೋಸ್ ದೇಶಗಳು ಉತ್ತಮ ಆರ್ಥಿಕತೆಯನ್ನು ಸಾಧಿಸುವ ಮೂಲಕ ಜನತೆಯ ಬದುಕನ್ನು ಮೇಲ್ಮಟ್ಟಕ್ಕೇರಿಸಿದೆ.ಹೀಗೆ ಸಮಾಜವಾದಿ ವ್ಯವಸ್ಥೆಯ ಹಿಂದಿರುವ ಕಮ್ಯುನಿಸ್ಟ್ ಸಿದ್ದಾಂತದಿಂದ ಮಾತ್ರವೇ ಹಸಿವು ಬಡತನ ದಾರಿದ್ರ್ಯ ನಿರುದ್ಯೋಗ ಮುಕ್ತ ಸಮಾಜದ ನಿರ್ಮಾಣ ಸಾಧ್ಯವೆಂದು ಜಿಲ್ಲೆಯ ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರರಾದ ಕೃಷ್ಣಪ್ಪ ಸಾಲ್ಯಾನ್ ಅವರು ಹೇಳಿದರು.
ಅವರು ಕುತ್ತಾರ್ ನಲ್ಲಿರುವ ಮುನ್ನೂರು ಯುವಕ ಮಂಡಲದಲ್ಲಿ ಎರಡು ದಿನಗಳ ಕಾಲ ಜರುಗಲಿರುವ CPIM ಪಕ್ಷದ ಉಳ್ಳಾಲ ತಾಲೂಕು ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸುತ್ತಾ,ಈ ಮಾತುಗಳನ್ನು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ CPIM ಜಿಲ್ಲಾ ಸಮಿತಿ ಸದಸ್ಯರಾದ ಶೇಖರ್ ಕುಂದರ್ ರವರು ಮಾತನಾಡುತ್ತಾ, ಕಮ್ಯುನಿಸ್ಟ್ ಪಕ್ಷಗಳ ಬಗ್ಗೆ ಜಾಗತಿಕ ಮಟ್ಟದಲ್ಲಿಯೇ ವ್ಯಾಪಕ ಅಪಪ್ರಚಾರಗಳು ನಡೆಯುತ್ತಿದ್ದರೂ,ಕಮ್ಯೂನಿಸ್ಟ್ ಸಿದ್ದಾಂತ ಮತ್ತೆ ಮತ್ತೆ ಜನತೆಯ ಹೃದಯದಲ್ಲಿ ಅರಳುವ ಮೂಲಕ ಕಮ್ಯುನಿಸಂನಿಂದ ಮಾತ್ರ ಜನತೆಯ ಬದುಕು ಉತ್ತಮಗೊಳ್ಳಲು ಸಾಧ್ಯವೆಂದು ಶ್ರೀಲಂಕಾ,ಲ್ಯಾಟಿನ್ ಅಮೇರಿಕಾದ ದೇಶಗಳು ಸೇರಿದಂತೆ ಜಗತ್ತಿನ ಹಲವಾರು ದೇಶಗಳು ಎಡಪಂಥೀಯ ವಿಚಾರಧಾರೆಯತ್ತ ಸಾಗುತ್ತಿರುವ ಮೂಲಕ ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.
CPIM ದ.ಕ. ಜಿಲ್ಲಾ ಸಮಿತಿ ಸದಸ್ಯರಾದ ಯು ಜಯಂತ ನಾಯಕ್ ರವರು ಮಾತನಾಡಿ, ವೈಜ್ಞಾನಿಕ ತಳಹದಿಯ ಆಧಾರದಲ್ಲಿ ಮೂಡಿ ಬಂದಿರುವ ಮಾರ್ಕ್ಸ್‌ವಾದಿ ಸಿದ್ದಾಂತ ಕುರುಡು ನಂಬಿಕೆಯಲ್ಲ,ಅದೊಂದು ವಿಜ್ಞಾನ.ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ವ್ಯವಸ್ಥೆಗಳ ವಿರುದ್ದವಾಗಿ ಅತ್ಯಂತ ದೃಢವಾಗಿ ಹೋರಾಡುವ ಶಕ್ತಿ ಮಾರ್ಕ್ಸ್‌ವಾದಕ್ಕೆ ಮಾತ್ರವೇ ಇದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CPIM ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮುಂಬರುವ ದಿನಗಳಲ್ಲಿ ಸೌಹಾರ್ದತೆಯ ನೆಲೆಬೀಡಾಗಿದ್ದ ದ.ಕ.ಜಿಲ್ಲೆಯ ಅಭಿವೃದ್ಧಿ ಮತ್ತು ಸೌಹಾರ್ದತೆಯನ್ನು ನಾಶ ಮಾಡಿದ ಬಿಜೆಪಿ ಕಾಂಗ್ರೆಸ್ ಗಳ ಜನವಿರೋಧಿ ನೀತಿಗಳ ವಿರುದ್ಧ ಅತ್ಯಂತ ಸಮರಶೀಲವಾಗಿ CPIM ಹೋರಾಡಲಿದ್ದು,ಈ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಸೈದ್ದಾಂತಿಕವಾಗಿ ಗಟ್ಟಿಗೊಳಿಸಲು ಇಂತಹ ಅಧ್ಯಯನ ಶಿಬಿರಗಳು ನಾಂದಿ ಹಾಡಲಿದೆ ಎಂದು ಹೇಳಿದರು
ವೇದಿಕೆಯಲ್ಲಿ CPIM ಜಿಲ್ಲಾ ನಾಯಕರಾದ ಡಾ.ಕೃಷ್ಣಪ್ಪ ಕೊಂಚಾಡಿಯವರು ಉಪಸ್ಥಿತರಿದ್ದರು.

