ಗ್ಯಾರಂಟಿ ಭ್ರಷ್ಟಾಚಾರ: ಸಮಿತಿ ವಜಾಗೊಳಿಸಿ ಸಮಗ್ರ ತನಿಖೆ ನಡೆಸಿ, ಸತೀಶ್ ಕುಂಪಲ

ಗ್ಯಾರಂಟಿ ಭ್ರಷ್ಟಾಚಾರ: ಸಮಿತಿ ವಜಾಗೊಳಿಸಿ ಸಮಗ್ರ ತನಿಖೆ ನಡೆಸಿ, ಸತೀಶ್ ಕುಂಪಲ


ಮಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಗ್ಯಾರಂಟಿ ಸಮಿತಿಗಳು ಅವ್ಯವಹಾರ ನಡೆಸಿವೆ. ಆದ್ದರಿಂದ ಗ್ಯಾರಂಟಿ ಸಮಿತಿಗಳನ್ನು ವಜಾಗೊಳಿಸಿ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಜನತೆಗೆ ತಿಳಿಸಬೇಕು ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಸ್ಕೀಂಗಳನ್ನು ಜಾರಿಗೊಳಿಸುವ ಭರವಸೆ ನೀಡಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿದೆ. ಸಿಎಂ ಸಿದ್ದರಾಮಯ್ಯ ಅವಧಿಯ ಮೂರು ವರ್ಷಗಳಲ್ಲಿ ಗ್ಯಾರಂಟಿ ಸ್ಕೀಂ ಅನುಷ್ಠಾನದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದಕ್ಕೆ ಸರ್ಕಾರದ ವರದಿಗಳೇ ಸಾಕ್ಷಿ. ಗ್ಯಾರಂಟಿ ಸ್ಕೀಂ ಅನುಷ್ಠಾನ ಹೆಸರಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಿದ ಸರ್ಕಾರ, ಅದರ ಪದಾಧಿಕಾರಿಗಳಿಗೆ ಮಾಸಿಕ ಸಾವಿರಾರು ರು. ಭತ್ಯೆಯನ್ನು ಪಾವತಿಸಿದೆ. ಇಲ್ಲಿ ಗ್ಯಾರಂಟಿ ಸ್ಕೀಂ ಮೊತ್ತಕ್ಕಿಂತ ಅಧಿಕ ಮೊತ್ತ ಪಾವತಿಸಲಾಗಿದೆ. ಗ್ಯಾರಂಟಿ ಸ್ಕೀಂನಲ್ಲಿ ಅನರ್ಹ ಫಲಾನುಭವಿಗಳ ಸೇರ್ಪಡೆಯಾಗಿರುವುದಕ್ಕೆ ಅನುಷ್ಠಾನ ಸಮಿತಿ ಪದಾಧಿಕಾರಿಗಳೇ ಕಾರಣ. ಅಧಿಕಾರಿಗಳ ಮೇಲಿನ ಅಪನಂಬಿಕೆಯಿಂದ ಇಂತಹ ಸಮಿತಿಯನ್ನು ಹುಟ್ಟು ಹಾಕಲಾಗಿದೆ. ಅಂದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಗ್ಯಾರಂಟಿ ಸ್ಕೀಂ ಸರಿಯಾಗಿ ಅನುಷ್ಠಾನಗೊಂಡಿಲ್ಲ ಎನ್ನುವುದನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರೇ ಬಹಿರಂಗವಾಗಿ ಹೇಳಿಕೊಂಡು ಬರುತ್ತಿದ್ದಾರೆ. ಹಾಗಾಗಿ ಗ್ಯಾರಂಟಿ ಸ್ಕೀಂ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಪಾವತಿಯಾದ ಮೊತ್ತ ಎಷ್ಟು? ಸ್ಕೀಂಗೆ ಅನರ್ಹರ ಸೇರ್ಪಡೆ ಹೇಗೆ ಆಯಿತು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಿ ಮಾಹಿತಿ ಹೊರತರಬೇಕು ಎಂದು ಒತ್ತಾಯಿಸಿದರು.

ಗೃಹ ಲಕ್ಷ್ಮಿ ಯೋಜನೆಯಲ್ಲಿ ರಾಜ್ಯದಲ್ಲಿ 1.94 ಲಕ್ಷ ಮಹಿಳೆಯರು ಅನರ್ಹರಿದ್ದಾರೆ ಎಂದು ಸರ್ಕಾರವೇ ಹೇಳಿದೆ. ಅದರಲ್ಲಿ ದ.ಕ. ಜಿಲ್ಲೆಯಲ್ಲಿ 3,477 ಮಂದಿ ಮರಣ ಹೊಂದಿದ್ದು, ಅವರ ಖಾತೆಗೆ 3.34 ಲಕ್ಷ ರೂ. ಪಾವತಿಸಲಾಗಿದೆ ಎಂದು ತಿಳಿಸಲಾಗಿದೆ. ಹಾಗಾದರೆ ಗ್ಯಾರಂಟಿ ಸ್ಕೀಂ ಹೆಸರಲ್ಲಿ ಸರ್ಕಾರದ ಬೊಕ್ಕಸವನ್ನೇ ಕಾಂಗ್ರೆಸ್ ಕೊಳ್ಳೆ ಹೊಡೆದಿದೆ ಎಂದು ಆರೋಪಿಸಿದರು.

ಪ್ರಸಕ್ತ ಗ್ಯಾರಂಟಿ ಸ್ಕೀಂಗಳಿಗೆ ಸರ್ವೆ ನಡೆಸುವ ವೇಳೆ ಜಾತಿ ಗುರುತಿಸುವ ಕೆಲಸ ನಡೆಯುತ್ತಿದೆ. ಇದು ಒಂದು ವರ್ಗವನ್ನು ತುಷ್ಠೀಕರಣ ಮಾಡುವ ಹುನ್ನಾರವಾಗಿದೆ. ಇದನ್ನು ಎಷ್ಟು ಮಾತ್ರಕ್ಕೂ ಬಿಜೆಪಿ ಸಹಿಸುವುದಿಲ್ಲ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ದೇಶ ಮಾತ್ರವಲ್ಲ ಹೊರ ದೇಶಗಳಲ್ಲೂ ಕಾರ್ಯಾಚರಿಸುತ್ತಿದೆ. ಅದರ ವಿರುದ್ಧ ಕರ್ನಾಟಕ ಹೊರತುಪಡಿಸಿ ಬೇರೆ ಎಲ್ಲಿಯೂ ಯಾರೂ ಮಾತನಾಡುತ್ತಿಲ್ಲ. ಆದರೆ ರಾಜ್ಯದ ಗೃಹ ಸಚಿವರು ಆರ್‌ಎಸ್‌ಎಸ್ ನೋಂದಣಿ ಇತ್ಯಾದಿ ವಿಚಾರಗಳ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಹಿಂದೆ ಆರ್‌ಎಸ್‌ಎಸ್ ನಿಷೇಧಿಸಿದಾಗಲೂ ಅದಕ್ಕೆ ಏನೂ ಆಗಿಲ್ಲ, ಈಗಲೂ ಆರ್‌ಎಸ್‌ಎಸ್ನ್ನು ದಮನಿಸಲು ಮುಂದಾದರೆ ಏನೂ ಆಗುವುದಿಲ್ಲ, ಬದಲು ಇನ್ನಷ್ಟು ಬಲಿಷ್ಠ ಆಗುತ್ತದೆ. ಬಿಜೆಪಿಗೆ ಇಲ್ಲಿನ ಗೃಹ ಮಂತ್ರಿ ಲೆಕ್ಕಕ್ಕಿಲ್ಲ ಎಂದರು.

ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಡ್ಡಮತದಾನಕ್ಕೆ ಸಿಎಂ ಡಿಕೆಶಿ ಕಾರಣ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಶಾಸಕರಿಂದ ಅಡ್ಡಮತದಾನ ನಡೆದದ್ದು ನಿಜ. ಈ ವೇಳೆ ಆಣೆಪ್ರಮಾಣ ಬಗ್ಗೆ ರಾಜ್ಯಾಧ್ಯಕ್ಷ ನೆಲೆಯಲ್ಲಿ ವಿಜಯೇಂದ್ರ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಈಗ ಅದೆಲ್ಲವೂ ಸರಿಯಾಗಿದೆ. ಒಂದು ವೇಳೆ ಅಡ್ಡಮತದಾನಕ್ಕೆ ಬಿಜೆಪಿ ಶಾಸಕರನ್ನು ಸಿಎಂ ಡಿಕೆಶಿ ಒಪ್ಪಿಸಿದ್ದರೆ, ಡಿಕೆಶಿಯನ್ನು ಅವರ ಪಕ್ಷದಲ್ಲೇ ಪೂರ್ತಿಯಾಗಿ ಒಪ್ಪುತ್ತಾರಾ ಎಂಬುದನ್ನು ಮೊದಲು ಅವರು ಖಚಿತಪಡಿಸಿಕೊಳ್ಳಲಿ. ಅವರ ಬಗ್ಗೆಯೇ ಪಕ್ಷದಲ್ಲಿ ಅಸಮಾಧಾನ ಇದೆ ಎಂದರು.

ಮುಖಂಡರಾದ ಪ್ರೇಮಾನಂದ ಶೆಟ್ಟಿ, ತಿಲಕ್ ರಾಜ್, ಪೂಜಾ ಪೈ, ಪೂರ್ಣಿಮಾ, ಗುರುಚರಣ್, ಮನೋಹರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article