ಕರಾವಳಿಯಲ್ಲಿ ಕ್ಷೀಣಿಸಿದ ಮುಂಗಾರು ಆರ್ಭಟ: ಮುಂದಿನ ಎರಡು ದಿನ ಸಾಧಾರಣ ಮಳೆ ಸಾಧ್ಯತೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯಾದ್ಯಂತ ಮುಂಗಾರು ಮಾರುತಗಳು ದುರ್ಬಲಗೊಂಡಿದ್ದು, ಭಾರಿ ಮಳೆಯ ಆರ್ಭಟ ಸದ್ಯಕ್ಕೆ ಕ್ಷೀಣಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಇರಲಿದ್ದು, ದಿನದಲ್ಲಿ ಎರಡರಿಂದ ಮೂರು ಬಾರಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬುಧವಾರ ಬೆಳಗ್ಗಿನಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿರುಸಿನ ಬಿಸಿಲಿನ ವಾತಾವರಣ ಕಂಡುಬಂದಿತ್ತು. ಆದರೆ ಮಧ್ಯಾಹ್ನದ ನಂತರ ದಿಢೀರ್ ಹವಾಮಾನ ಬದಲಾಗಿದ್ದು, ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ. ಮಂಗಳೂರು ನಗರ, ಕಡಬ, ಸುಳ್ಯ, ಉಪ್ಪಿನಂಗಡಿ ಹಾಗೂ ಕಲ್ಲಡ್ಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನ ನಂತರ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಮುಂದಿನ ಒಂದೆರಡು ದಿನ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ.
ಮುಂದಿನ 48 ಗಂಟೆಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಹಾಗೂ ಗಡಿ ಜಿಲ್ಲೆ ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಬಿಸಿಲು-ಮೋಡದ ಜೂಟಾಟ ಇರಲಿದ್ದು, ದಿನದ ವಿವಿಧ ಅವಧಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಭಾರಿ ಮಳೆಯ ಮುನ್ಸೂಚನೆ ಇಲ್ಲದಿದ್ದರೂ, ಮಧ್ಯಾಹ್ನದ ಬಳಿಕ ವಾತಾವರಣ ತಂಪಾಗುವ ಸಾಧ್ಯತೆ ಹೆಚ್ಚಿದೆ ಎಂದು ಇಲಾಖೆ ತಿಳಿಸಿದೆ.
ಮುಂಗಾರು ದುರ್ಬಲ:
ಜಾಗತಿಕ ಹವಾಮಾನ ವೈಪರೀತ್ಯಗಳು ಪ್ರಸ್ತುತ ಮುಂಗಾರು ಮಾರುತಗಳ ಮೇಲೆ ಪ್ರಭಾವ ಬೀರಿವೆ. ಭೂಮಧ್ಯ ರೇಖೆಗಿಂತ ಕೆಳಗೆ ಹಿಂದೂ ಮಹಾಸಾಗರದಲ್ಲಿ ಮುಂಗಾರಿಗೆ ಪೂರಕವಾದ ವಾತಾವರಣದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸುತ್ತಿವೆ. ಆಸ್ಟ್ರೇಲಿಯಾ ಕಡೆಯಿಂದ ಬೀಸುವ ಮಾರುತಗಳು ದುರ್ಬಲಗೊಂಡಿರುವುದು ಮುಂಗಾರಿನ ವೇಗಕ್ಕೆ ತಡೆಯೊಡ್ಡಿದೆ. ಮುಂಗಾರನ್ನು ಚುರುಕುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸೋಮಾಲಿಯ ಜೆಟ್ ಸ್ಟ್ರೀಮ್‌ಗಳು ನಿರೀಕ್ಷಿತ ಮಟ್ಟದಲ್ಲಿ ಸಕ್ರಿಯಗೊಂಡಿಲ್ಲ. ಈ ಜಾಗತಿಕ ವಿದ್ಯಮಾನಗಳಿಂದಾಗಿ ಸದ್ಯಕ್ಕೆ ಭಾರಿ ಮಳೆಯಾಗುವ ಸಾಧ್ಯತೆಗಳು ಕ್ಷೀಣಿಸಿದ್ದು, ಕೇವಲ ಸಾಮಾನ್ಯ ಮುಂಗಾರು ಮಳೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.