ಜುಲೈ 4ರಿಂದ 13ರವರೆಗೆ ರಾಜ್ಯ ಮಟ್ಟದ ಮಹಿಳಾ ಮದ್ಯವರ್ಜನ ಶಿಬಿರ: ಆಳ್ವಾಸ್ ಪುನರ್ಜನ್ಮ ಕೇಂದ್ರದಲ್ಲಿ ಪೂರ್ವಭಾವಿ ಸಭೆ

ಜುಲೈ 4ರಿಂದ 13ರವರೆಗೆ ರಾಜ್ಯ ಮಟ್ಟದ ಮಹಿಳಾ ಮದ್ಯವರ್ಜನ ಶಿಬಿರ: ಆಳ್ವಾಸ್ ಪುನರ್ಜನ್ಮ ಕೇಂದ್ರದಲ್ಲಿ ಪೂರ್ವಭಾವಿ ಸಭೆ


ಮೂಡುಬಿದಿರೆ: ಆಳ್ವಾಸ್ ಪುನರ್ಜನ್ಮ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 4ರಿಂದ 13ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಮಹಿಳಾ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಮಾಲೋಚನಾ ಸಭೆ ಮೂಡುಬಿದಿರೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್, ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಮದ್ಯ ಹಾಗೂ ಮಾದಕ ವ್ಯಸನಗಳ ಬಲೆಗೆ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಮಹಿಳೆಯರನ್ನು ವ್ಯಸನಮುಕ್ತ ಬದುಕಿನತ್ತ ಕೊಂಡೊಯ್ಯುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದರು. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಇದುವರೆಗೆ ಸುಮಾರು 1.5 ಲಕ್ಷಕ್ಕೂ ಅಧಿಕ ಮಂದಿ ವಿವಿಧ ವ್ಯಸನಗಳಿಂದ ಮುಕ್ತರಾಗಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ವೈದ್ಯಕೀಯ ಕಾಲೇಜಿನ ಡೀನ್ ಡಾ. ಮಹಾಬಲ ಶೆಟ್ಟಿ, ಶಿಬಿರದಲ್ಲಿ ಭಾಗವಹಿಸುವ ಮಹಿಳೆಯರ ವೈಯಕ್ತಿಕ ಮಾಹಿತಿ ಹಾಗೂ ಚಿಕಿತ್ಸಾ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪುನರ್ಜನ್ಮದ ಆಪ್ತ ಸಮಾಲೋಚಕಿ ಸುಮನ ಪಿಂಟೋ, ಆಳ್ವಾಸ್ ಪುನರ್ಜನ್ಮ–ಪ್ರೈಮ್ ಸೆಂಟರ್ ಫಾರ್ ಸೈಕಲಾಜಿಕಲ್ ಮೆಡಿಸಿನ್ ಕಳೆದ ಆರು ವರ್ಷಗಳಿಂದ ವ್ಯಸನಮುಕ್ತಿ ಹಾಗೂ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಹಿಳೆಯರಿಗಾಗಿ ವಿಶೇಷ ಡಿ-ಅಡಿಕ್ಷನ್ ವಾರ್ಡ್ ಆರಂಭಿಸುವ ಯೋಜನೆಯೂ ಇದೆ ಎಂದು ತಿಳಿಸಿದರು.

ಶಿಬಿರದಲ್ಲಿ ಮನೋವೈದ್ಯಕೀಯ, ಸ್ತ್ರೀರೋಗ, ದಂತ, ನೇತ್ರ, ಚರ್ಮ, ನರರೋಗ ಸೇರಿದಂತೆ ವಿವಿಧ ವಿಭಾಗಗಳ ವೈದ್ಯಕೀಯ ತಪಾಸಣೆ, ಡಿಟಾಕ್ಸ್ ಚಿಕಿತ್ಸೆ, ಸಮಾಲೋಚನೆ, ಯೋಗ, ಧ್ಯಾನ, ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡಲಾಗುವುದು. ಭಾಗವಹಿಸುವವರಿಗೆ ಆಹಾರ, ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಸಭೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಡುಬಿದಿರೆ ವಲಯದ ವಾಸುದೇವ ನಾಯ್ಕ, ಸುಭಾಶ್ಚಂದ್ರ ಚೌಟ, ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು. ಧನಂಜಯ ವಂದಿಸಿದರು. ಗಣೇಶ್ ಆಚಾರ್ಯ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article