ಮೂಡುಬಿದಿರೆಯಲ್ಲಿ ಖೇತ ಬಚಾವ ಅಭಿಯಾನ

ಮೂಡುಬಿದಿರೆಯಲ್ಲಿ ಖೇತ ಬಚಾವ ಅಭಿಯಾನ


ಮೂಡುಬಿದಿರೆ: ಮೂಡುಬಿದಿರೆ ಕೃಷಿ ಇಲಾಖೆ ವತಿಯಿಂದ ಆತ್ಮ ಯೋಜನೆಯಡಿ "ಖೇತ ಬಚಾವ" ಅಭಿಯಾನವು ಮೂಡುಕೊಣಾಜೆ ಗ್ರಾಮದ ಕಂಚರ್ಲಗುಡ್ಡೆಯಲ್ಲಿ ಮಂಗಳವಾರ ನಡೆಯಿತು.

ಉಪ ಕೃಷಿ ನಿರ್ದೇಶಕ ಡಾ. ಅಶೋಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳೆಗಳ ಬೆಳವಣಿಗೆಯಲ್ಲಿ ಸಮತೋಲನ ರಸಗೊಬ್ಬರ ಬಳಕೆಯ ಮಹತ್ವವನ್ನು ವಿವರಿಸಿದರು. ಮಣ್ಣಿನ ಪರೀಕ್ಷಾ ವರದಿ ಆಧರಿಸಿ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಯೂರಿಯಾ ಸೇರಿದಂತೆ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ರೈತರು ಸಾವಯವ ಗೊಬ್ಬರ ಹಾಗೂ ಜೈವಿಕ ಗೊಬ್ಬರಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಆಳ್ವಾಸ್ ಅಗ್ರಿ ಕಾಲೇಜಿನ ಡೀನ್ ಡಾ. ವಾಸುದೇವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ  ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಇಳುವರಿ ಹೆಚ್ಚಿಸಬಹುದಾಗಿದೆ. ಹವಾಮಾನ ವೈಪರೀತ್ಯ ಹಾಗೂ ಕೀಟ-ರೋಗ ಬಾಧೆಗಳನ್ನು ಸಮರ್ಥವಾಗಿ ಎದುರಿಸಲು ರೈತರು ಕೃಷಿ ತಜ್ಞರ ಸಲಹೆಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು. 

ಪ್ರಗತಿಪರ ರೈತ ಡಾ. ನಾಗರಾಜ ಶೆಟ್ಟಿ ಅವರು ರೈತರು ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿಸಬೇಕೆಂದು ಕರೆ ನೀಡಿದರು. 

ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಕೇದಾರನಾಥ್ ಅವರು ಮುಂಗಾರು ಹಂಗಾಮಿಗೆ ಸೂಕ್ತವಾದ ಹೊಸ ಭತ್ತದ ತಳಿಗಳ ಕುರಿತು ಮಾಹಿತಿ ನೀಡಿದರು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ನೀಡುವ ಹಾಗೂ ರೋಗ ನಿರೋಧಕ ಶಕ್ತಿ ಹೊಂದಿರುವ ಭತ್ತದ ತಳಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು. ಉತ್ತಮ ಗುಣಮಟ್ಟದ ಬೀಜ ಬಳಕೆಯಿಂದ ಉತ್ಪಾದನೆ ಹೆಚ್ಚಿಸುವ ಜತೆಗೆ ಕೃಷಿ ವೆಚ್ಚವನ್ನೂ ನಿಯಂತ್ರಿಸಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೈತರೊಂದಿಗೆ ಸಂವಾದ ನಡೆಸಿ ಬೆಳೆಗಳ ನಿರ್ವಹಣೆ, ಕೀಟ ನಿಯಂತ್ರಣ ಹಾಗೂ ರೋಗ ನಿರ್ವಹಣೆಗೆ ಸಂಬಂಧಿಸಿದ ಮಾಹಿತಿಯನ್ನು ತಜ್ಞರು ಹಂಚಿಕೊಂಡರು.

ಪ್ರಗತಿಪರ ಕೃಷಿಕ ವಸಂತ ಶೆಟ್ಟಿ ಸ್ವಾಗತಿಸಿದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಲ್.ಎನ್. ಗೌಡ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article