ಮಳೆ-ಗಾಳಿಗೆ ರಾಷ್ಟ್ರೀಯ ಹೆದ್ದಾರಿಗೆ ಉರುಳಿದ ಮರ

ಮಳೆ-ಗಾಳಿಗೆ ರಾಷ್ಟ್ರೀಯ ಹೆದ್ದಾರಿಗೆ ಉರುಳಿದ ಮರ


ಉಜಿರೆ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ಬಳಿ ಬೃಹತ್ ಗಾತ್ರದ ಮರವೊಂದು ಮಂಗಳವಾರ ಬೆಳಗಿನ ಜಾವ ರಸ್ತೆಗೆ ಉರುಳಿದ ಘಟನೆ ನಡೆದಿದೆ.

ರಸ್ತೆಗೆ ಮರ ಬಿದ್ದ ಜಾಗದ ಒಂದು ಭಾಗದಲ್ಲಿ ಒಂದು ವಾಹನ ಸಂಚರಿಸುವಷ್ಟು ಸ್ಥಳವಿದ್ದ ಕಾರಣ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗಲಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯ ಮುಂಡಾಜೆಯ ಸಚಿನ್ ಭಿಡೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ್ ಬಂಗೇರ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹಿಟಾಚಿ ಮೂಲಕ ಮರವನ್ನು ತೆರವುಗೊಳಿಸಲಾಯಿತು. ಸುಮಾರು ಮೂರು ತಾಸಿಗಿಂತ ಅಧಿಕ ಕಾಲ ಸಂಚಾರಕ್ಕೆ ಸಮಸ್ಯೆ ಕಂಡು ಬಂತು.

ಜೂ.2 ರಂದು ಕೂಡ ಈ ಸ್ಥಳದಿಂದ ಅನತಿ ದೂರದಲ್ಲಿ ಮರವೊಂದು ರಸ್ತೆಗೆ ಉರುಳಿ ತಾಸುಗಟ್ಟಲೆ ಸಂಚಾರ ಅಸ್ತವ್ಯಸ್ತವಾಗಿತ್ತು.

ಸಾರ್ವಜನಿಕರ ಆಕ್ರೋಶ:

ಸೀಟು ಪ್ರದೇಶದಲ್ಲಿ ಸುಮಾರು 25ಕ್ಕಿಂತ ಅಧಿಕ ಅಪಾಯಕಾರಿ ಮರಗಳಿದ್ದು ಇವು ರಸ್ತೆಗೆ ಉರುಳಿ ಬೀಳುವ ಸಾಧ್ಯತೆ ಇದೆ. ಹೆದ್ದಾರಿ ಕಾಮಗಾರಿ ಅಂಗವಾಗಿ ಇಲ್ಲಿ ಮರಗಳ ಬುಡದ ತನಕ ಅಗೆದು ಹಾಕಲಾಗಿದ್ದು ಮಳೆ ಆರಂಭವಾಗುತ್ತಿದ್ದಂತೆ ಮಣ್ಣು ಸವಕಳಿಗೊಂಡು ಮರಗಳು ದಿನದಿಂದ ದಿನಕ್ಕೆ ರಸ್ತೆಯತ್ತ ವಾಲುತ್ತಿವೆ.

ಇವುಗಳಲ್ಲಿ ಕೆಲವೊಂದು ಮರಗಳು ಯಾವುದೇ ಸಮಯ ರಸ್ತೆಗೆ ಬೀಳುವ ಸ್ಥಿತಿಯಲ್ಲಿವೆ. ಈ ಮರಗಳನ್ನು ತುರ್ತು ತೆರವುಗೊಳಿಸಬೇಕಾದ ಅಗತ್ಯವಾಗಿದೆ. ಇಂತಹ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ, ತಕ್ಷಣ ತೆರವುಗೊಳಿಸಿ, ವಾಹನ ಸವಾರರಿಗೆ ಅಪಾಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. 

ಈ ಪ್ರದೇಶದಲ್ಲಿ ಮರಗಳು ಉರುಳಿ ಬೀಳುವುದು ಸಾಮಾನ್ಯವಾಗಿದೆ. ಅಪಾಯಕಾರಿ ಮರಗಳ ಕುರಿತು ಅರಣ್ಯ ಇಲಾಖೆಗೆ ಸಾಕಷ್ಟು ಮನವಿ ಮಾಡಲಾಗಿದ್ದರು. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮೂರು ಕಿ.ಮೀ. ಪ್ರದೇಶದಲ್ಲಿ ವಾಹನ ಸವಾರರು ಭಯದಿಂದ ಸಂಚರಿಸುವ ವಾತಾವರಣ ಇದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article