ತೊಕ್ಕೊಟ್ಟು ಸರ್ವಿಸ್ ರಸ್ತೆಗಳಲ್ಲಿ ಇನ್ನು ಏಕಮುಖ ಸಂಚಾರ

ತೊಕ್ಕೊಟ್ಟು ಸರ್ವಿಸ್ ರಸ್ತೆಗಳಲ್ಲಿ ಇನ್ನು ಏಕಮುಖ ಸಂಚಾರ


ಉಳ್ಳಾಲ: ತೊಕ್ಕೊಟ್ಟು ಓವರ್ ಬ್ರಿಡ್ಜ್‌ನಲ್ಲಿ ಕೆಲ ದಿನಗಳ ಹಿಂದೆ ಸಂಚಾರಿ ಅವ್ಯವಸ್ಥೆಯಿಂದ ಉಂಟಾದ ಗೊಂದಲಗಳಿಗೆ ಪರಿಹಾರ ಸಿಗುವಂತೆ ಸ್ಪೀಕರ್ ಯು.ಟಿ. ಖಾದರ್ ಅವರು ತೊಕ್ಕೊಟ್ಟು ಓವರ್ ಬ್ರಿಡ್ಜ್, ಉಳ್ಳಾಲಬೈಲು, ತೊಕ್ಕೊಟ್ಟು ಜಂಕ್ಷನ್‌ಗೆ ಸಂಚಾರಿ ಪೊಲೀಸ್, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿಯೋಗದೊಂದಿಗೆ ಭೇಟಿ ನೀಡಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ತಕ್ಷಣಕ್ಕೆ ಪರಿಹಾರ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತೊಕ್ಕೊಟ್ಟು ಎರಡು ಬದಿಯ ಸರ್ವಿಸ್ ರಸ್ತೆಗಳಲ್ಲಿ ಏಕಮುಖ ಸಂಚಾರ ನಡೆಸಬೇಕು. ಉಳ್ಳಾಲ ಹೋಗುವ ಬಸ್ಸು, ಇತರೆ ವಾಹನಗಳು ಕಾಪಿಕಾಡು ಡಿವೈಡರ್ ದಾಟಿಯೇ ಉಳ್ಳಾಲದ ರಸ್ತೆಯಾಗಿ ತೆರಳಬೇಕು. ತೊಕ್ಕೊಟ್ಟು ಒಳಪೇಟೆ ಸಂಚರಿಸುವ ವಾಹನಗಳು ಉಳ್ಳಾಲಬೈಲ್ ಡಿವೈಡರ್ ದಾಟಿ ಬಳಿಕ ಓವರ್‌ಬ್ರಿಡ್ಜ್ ರಸ್ತೆಯಿಂದ ಇಳಿಯುವಂತೆ ಮಾಡಿದಾಗ ಸಂಚಾರ ವ್ಯವಸ್ಥೆಯಲ್ಲಿ ಅಡಚಣೆಗಳು ಆಗಲು ಸಾಧ್ಯವಿಲ್ಲ. ತೊಕ್ಕೊಟ್ಟುವಿನಿಂದ ಉಳ್ಳಾಲ ವರೆಗಿನ ರಸ್ತೆಬದಿಯ ಅಂಗಡಿಗಳನ್ನು ತೆರವುಗೊಳಿಸಬೇಕು, ಗಿಡಗಂಟೆಗಳನ್ನು ಕಡಿದು ಎರಡು ಬದಿಗಳಲ್ಲಿಯೂ ಸ್ವಚ್ಛತೆಯನ್ನು ಕಾಪಾಡುವಂತೆ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ತೊಕ್ಕೊಟ್ಟು ಜಂಕ್ಷನ್‌ನಲ್ಲಿ ತಲಪಾಡಿ ಕಡೆಗೆ ತೆರಳುವ, ಕೊಣಾಜೆ ಕಡೆಯಿಂದ ಬರುವ ಬಸ್ಸುಗಳು ಒಂದೇ ಕಡೆಯಲ್ಲಿ ನಿಲ್ಲುವುದರಿಂದ ವಾಹನ ದಟ್ಟಣೆ ಸಂದರ್ಭ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ತಲಪಾಡಿ ಕಡೆಗೆ ತೆರಳುವ ಬಸ್ಸುಗಳು 100 ಮೀ. ದೂರ ಸರ್ವಿಸ್ ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ಸಂಚಾರಿ ಪೊಲೀಸರಿಗೆ ಅವರು ತಿಳಿಸಿದರು.

ತೊಕ್ಕೊಟ್ಟು ಓವರ್‌ಬ್ರಿಡ್ಜ್-ಉಳ್ಳಾಲಬೈಲ್ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ. ಅನುದಾನದ ಪ್ರಸ್ತಾಪ ಇರಿಸಲಾಗಿದೆ. ಶೀಘ್ರವೇ ಮಂಜೂರುಗೊಂಡು ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ನಿನಲ್ಲಿ ವಾಹನ ದಟ್ಟಣೆ ಹೆಚ್ಚಾದಾಗ ಒಳಪೇಟೆಯಾಗಿ ತೆರಳಲು ಉಳ್ಳಾಲಬೈಲ್ ಕೆಳ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ಕಳಿಸುಹಿಸಬೇಕು. ಶೀಘ್ರವೇ ಉಳ್ಳಾಲಬೈಲ್ ರೈಲ್ವೇ ಹಳಿ ಸಮೀಪದ ಕಿರಿದಾದ ಸೇತುವೆಯನ್ನು ಅಗಲೀಕರಣಗೊಳಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ವಾಟ್ಸಪ್ ಆಡಿಯೋ:

ಉಳ್ಳಾಲ ತೊಕ್ಕೊಟ್ಟು ರಸ್ತೆ ಸಂಚಾರದಲ್ಲಿ ಹಲವು ಗಂಟೆಗಳ ಕಾಲ ಮೇ.30 ರಂದು ವ್ಯತ್ಯಯ ಉಂಟಾಗಿತ್ತು. ಈ ಕುರಿತು ಜನಸಾಮಾನ್ಯರೊಬ್ಬರು ರೋಗಿಯನ್ನು ಕೊಂಡೊಯ್ಯಲು ಹರಸಾಹಸ ಪಟ್ಟಿದ್ದಾಗಿಯೂ, ಶಾಸಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಆಡಿಯೋವನ್ನು ಸಾಮಾಜಿಕ ಜಾಲತಾಣಗಲ್ಲಿ ಹರಿಯಬಿಟ್ಟಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್ ಅವರು, ವಾಟ್ಸಪ್ ಮುಖೇನ ಎಷ್ಟು ಬೇಕಾದರೂ ಚರ್ಚಿಸಬಹುದು, ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಚರ್ಚಿಸಬೇಕೇ ಹೊರತು ಸಮಸ್ಯೆಗಳನ್ನೇ ಚರ್ಚಿಸುವುದಲ್ಲ. ಸಮಸ್ಯೆ ಆಗಬೇಕು ಅನ್ನುವುದೇ ವಿಚಾರವನ್ನು ಮುಂದುವರಿಸುವುದಲ್ಲ ಬದಲಾಗಿ ಜನರ ನಿಜವಾದ ಸಮಸ್ಯೆಯನ್ನು ಪರಿಹರಿಸುವ ಕಾರ್ಯ ಮಾಡಬೇಕು. ಆದರೆ ಅಂತಹವರಿಂದಾಗಿ ಸಮಸ್ಯೆ ಬಂದಾಗ ಸಮಸ್ಯೆ ಬಗೆಹರಿಸುವುದೇ ನಮಗೆ ಪ್ರೇರಣೆ ಎಂದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಾಡಿದ ಉತ್ತಮ ಕಾರ್ಯಗಳನ್ನು ಪ್ರೋತ್ಸಾಹಿಸಿ ಸರಕಾರ ಸದನವೀರ ಬಿರುದು ನೀಡಿತು. ಬಳಿಕ ಕಾರ್ಯವನ್ನು ಪ್ರೋತ್ಸಾಹಿಸಿ ಆರೋಗ್ಯ ಸಚಿವನಾಗಿ ಮುಂದುವರಿಯಲು ಅವಕಾಶವನ್ನು ಒದಗಿಸಿತು. ಅದನ್ನು ಉತ್ತಮವಾಗಿ ನಿಭಾಯಿಸಿದ ಕಾರಣಕ್ಕೆ ಆಹಾರ ಮತ್ತು ಹೌಸಿಂಗ್ ಬೋರ್ಡ್, ಅರ್ಬನ್ ಡೆವಲಪ್ ಮೆಂಟ್ ಎರಡು ಖಾತೆಗಳನ್ನು ತನ್ನ ಮುಡಿಗೆ ಹಾಕಿತ್ತು. ಎಲ್ಲಾ ಸಂದರ್ಭದಲ್ಲಿಯೂ ತನಗೆ ಕೊಟ್ಟ ಸ್ಥಾನಕ್ಕೆ ಚ್ಯುತಿ ಬಾರದಂತೆ, ಕಪ್ಪು ಚುಕ್ಕೆ ಬಾರದಂತೆ  ಕಾರ್ಯ ನಿರ್ವಹಿಸಿದ ತೃಪ್ತಿ ತನ್ನಲ್ಲಿದೆ.

ಸರಕಾರವೇ ಇಲ್ಲದಾಗ ಸಿದ್ಧರಾಮಯ್ಯನವರು ಕಲಾಪದ ಉಪನಾಯಕನಾಗಿ ನೇಮಕ ಮಾಡಿದ್ದರು, ಅಲ್ಲಿ ಮಾಡಿದ ಕಾರ್ಯಗಳನ್ನು ಗುರುತಿಸಿ ಸರಕಾರ ಬಂದಾಗ ಸಭಾಧ್ಯಕ್ಷರ ಸ್ಥಾನವನ್ನೇ ತನಗೆ ನೀಡಿದರು. ಅಲ್ಲಿ ಪರಿಣಾಮಕಾರಿಯಾಗಿ ಕಾರ್ಯಗಳನ್ನು ನಡೆಸಿದ ಪರಿಣಾಮ ದೇಶದ ಎಲ್ಲಾ ರಾಜ್ಯಗಳಿಗೆ ಹೋದಲ್ಲಿ ರಾಜ್ಯಕ್ಕೆ ವಿಶೇಷವಾದ ಗೌರವವೂ ದೊರೆತಿದೆ ಎಂದರು.

ಇಲಾಖಾ ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article