ಟ್ರಾಫಿಕ್ ದಂಡ ನಕಲಿ ಆಪ್ ನಂಬಿ 6, 83 ಲಕ್ಷ ಕಳಕೊಂಡ
ಕಾರ್ಕಳ: ಮೊಬೈಲ್ ಫೋನ್ಗೆ ಬಂದ ಟ್ರಾಫಿಕ್ ಉಲ್ಲಂಘನೆಯ ನಕಲಿ ನೋಟಿಸ್ ಹಾಗೂ ‘ಎಂಪರಿವಾಹನ್.ಎಪಿಕೆ’ ಎಂಬ ಲಿಂಕ್ ಅನ್ನು ಡೌನ್‌ಲೋಡ್ ಮಾಡಿದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮರು ಬರೋಬ್ಬರಿ 6, 83, 599 ರೂಪಾಯಿ ಹಣವನ್ನು ದೋಚಿರುವ ಆಘಾತಕಾರಿ ಘಟನೆ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಅಜೆಕಾರು ನಿವಾಸಿ ರತ್ನಾಕರ ಅಮೀನ್ ಎಂಬುವವರೇ ಈ ಸೈಬರ್ ದಾಳಿಗೆ ಒಳಗಾದ ದುರ್ದೈವಿ. ಈ ಸಂಬಂಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಐಟಿ ಆಕ್ಟ್ ಹಾಗೂ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ರತ್ನಾಕರ ಅಮೀನ್ ಅವರು ಜುಲೈ 5 ರಂದು ಮಧ್ಯಾಹ್ನ ತಮ್ಮ ಮನೆಯಲ್ಲಿದ್ದಾಗ, ಅವರ ವಾಟ್ಸಾಪ್‌ಗೆ ‘ಪರಿವಾಹನ್’ ಹೆಸರಿನ ಖಾತೆಯಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ ನಿಮ್ಮ ವಾಹನವು ಸಂಚಾರ ನಿಯಮ ಉಲ್ಲಂಘಿಸಿದೆ ಎಂದು ತಿಳಿಸಿ, ಅದಕ್ಕೆ ಸಂಬಂಧಿಸಿದ ದಂಡದ ನೋಟಿಸ್ ಇಲ್ಲಿದೆ ಎಂದು ನಂಬಿಸಿ ‘ಎಂಪರಿವಾಹನ್.ಎಪಿಕೆ’ ಎಂಬ ಆಂಡ್ರಾಯ್ಡ್ ಅಪ್ಲಿಕೇಶನ್ ಫೈಲ್ ಅನ್ನು ಕಳುಹಿಸಲಾಗಿತ್ತು. ಇದನ್ನು ನಿಜವೆಂದು ನಂಬಿದ ರತ್ನಾಕರ ಅವರ ಮಗ, ಮೊಬೈಲ್‌ನಲ್ಲಿ ಆ ಎಪಿಕೆ (APK) ಫೈಲ್ ಅನ್ನು ಆಳವಡಿಸಿದ್ದನು. ಅದೇ ದಿನ ರಾತ್ರಿ ಗಂಟೆಗೆ ರತ್ನಾಕರ ಅವರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ.
“ನಿಮ್ಮ ಬ್ಯಾಂಕ್ ಖಾತೆ ಹಾಗೂ ಅದರಲ್ಲಿರುವ ಹಣ ಸುರಕ್ಷಿತವಾಗಿರಬೇಕಾದರೆ ತಕ್ಷಣವೇ ನಿಮ್ಮ ಗೂಗಲ್ ಪಿನ್ ಸಂಖ್ಯೆಯನ್ನು ಬದಲಾಯಿಸಿ. ಇಲ್ಲದಿದ್ದರೆ ನಿಮ್ಮ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲಿ ಕಡಿತಗೊಳ್ಳುತ್ತದೆ ಎಂದು ಹೆದರಿಸಿದ್ದಾನೆ. ಗಾಬರಿಗೊಂಡ ರತ್ನಾಕರ ಅವರು ‘ಹೌದು’ ಎಂದು ಹೇಳಿ ಕರೆ ಕಡಿತಗೊಳಿಸಿದ್ದಾರೆ. ಆದರೆ ಅಷ್ಟರಲ್ಲೇ ಇವರ ಫೋನ್ ನಿಯಂತ್ರಣ ವಂಚಕರ ಕೈಸೇರಿತ್ತು.
ಇದರಿಂದ ಹೆದರಿದ ರತ್ನಾಕರ ಜು.8 ರಂದು ಬ್ಯಾಂಕಿಗೆ ತೆರಳಿ ತಮ್ಮ ಖಾತೆಯನ್ನು ಸುರಕ್ಷತೆಯ ದೃಷ್ಟಿಯಿಂದ ಅನ್ಬ್ಲಾಕ್ ಮಾಡಿಸಿಕೊಂಡಿದ್ದರು. ಆದರೆ, ಜುಲೈ 12 ರಂದು ರಾತ್ರಿ 9 ಗಂಟೆಯಿಂದ ರತ್ನಾಕರ ಅವರ ಮೊಬೈಲ್ಗೆ ಬ್ಯಾಂಕ್ ಖಾತೆಯಿಂದ ಸರಣಿ ಹಣ ಕಡಿತದ ಸಂದೇಶಗಳು ಬರಲಾರಂಭಿಸಿವೆ. ವಾಟ್ಸಾಪ್ ಹಾಗೂ ಮೊಬೈಲ್ ಫೋನ್ ಅನ್ನು ಹ್ಯಾಕ್ ಮಾಡಿದ್ದ ಖದೀಮರು ಮೊದಲ ಹಂತದಲ್ಲಿ 6,01,901 ರೂಪಾಯಿ ಹಣವನ್ನು ಎಗರಿಸಿದ್ದರು. ತಕ್ಷಣವೇ ರತ್ನಾಕರ ಅವರು ಸೈಬರ್ ಸಹಾಯವಾಣಿ `1930' ಗೆ ಕರೆ ಮಾಡಿ ದೂರು ನೀಡಿದ್ದರು.
ಮರುದಿನ ಅಂದರೆ ಜುಲೈ 13 ರಂದು ಅವರು ಬ್ಯಾಂಕಿಗೆ ತೆರಳಿ ಖಾತೆಯ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ, ವಂಚಕರು ಒಟ್ಟು 6,83,599 ಹಣವನ್ನು ವಿವಿಧ ಅಪರಿಚಿತ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ. ರತ್ನಾಕರ ಅಮೀನ್ ನೀಡಿದ ದೂರಿನ ಮೇರೆಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.