ವಿದ್ಯಾರ್ಥಿಯ ಅಪಹರಣ ಮೂವರ ಬಂಧನ
ಕೃತ್ಯಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರ:
ಪೊಲೀಸ್ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದ ನಿವಾಸಿ ತಾರೇಶ್ ಎಂಬುವವರ ಅಪ್ರಾಪ್ತ ವಯಸ್ಕ ಪುತ್ರ, 9ನೇ ತರಗತಿ ವಿದ್ಯಾರ್ಥಿ ಜೂನ್ 1ರಂದು ಬೆಳಿಗ್ಗೆ ಬ್ರಹ್ಮಾವರ ಬಸ್ ನಿಲ್ದಾಣದಲ್ಲಿದ್ದಾಗ ಆರೋಪಿಗಳು ಆತನನ್ನು ಅಪಹರಿಸಿದ್ದಾರೆ. ನಂತರ ಬಾಲಕನನ್ನು ಕೇರಳ ರಾಜ್ಯದ ತಲಪಾಡಿ ಸಮೀಪದ ಕುಂಜತ್ತೂರು ಪದವು ಎಂಬಲ್ಲಿರುವ ವುಡ್ ಕಂಪನಿಯೊಂದಕ್ಕೆ ಕರೆದೊಯ್ದು, ಆತನ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಕೆಲಸಕ್ಕೆ ಸೇರಿಸಿದ್ದಾರೆ.
ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ, ಜೀವ ಬೆದರಿಕೆ:
ಬಾಲಕನು ತನಗೆ ಕೆಲಸ ಮಾಡಲು ಸಾಧ್ಯವಿಲ್ಲ, ಮನೆಗೆ ಹೋಗಬೇಕು ಎಂದು ವಿನಂತಿಸಿಕೊಂಡರೂ ಆರೋಪಿಗಳು ಅದಕ್ಕೆ ಆಸ್ಪದ ನೀಡಿಲ್ಲ. ಜೂನ್ 9ರಂದು ತಾವು ವಾಸವಿದ್ದ ಕೋಣೆಯಲ್ಲಿ ಮಧ್ಯಾನ್ಹ 1.30 ರ ವೇಳೆಯಲ್ಲಿ ಆರೋಪಿಗಳ ಪೈಕಿ ಒಬ್ಬನಾದ ಸುಚಿತ್ ನಾಯಕ್ ಎಂಬಾತ ಬಾಲಕನಿಗೆ ವೈರ್‌ನಿಂದ ಮನಸೋಇಚ್ಛೆ ಥಳಿಸಿ ಕ್ರೌರ್ಯ ಮೆರೆದಿದ್ದಾನೆ. ಮತ್ತೊಬ್ಬ ಆರೋಪಿ ವಿಖ್ಯಾತ್ ಆಚಾರ್ಯ ಎಂಬಾತ ಚೂರಿ ತೋರಿಸಿ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಇಡೀ ಅಮಾನವೀಯ ಕೃತ್ಯ ಹಾಗೂ ದೌರ್ಜನ್ಯದ ದೃಶ್ಯವನ್ನು ಪ್ರಕರಣದ ಮೂರನೇ ಆರೋಪಿ
ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ ಎಂದು ಸಂತ್ರಸ್ತ ಬಾಲಕನ ಪೋಷಕರು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ವಿವಿಧ ಕಾಯಿದೆ, ವಿವಿಧ ಕಲಂ ಗಳಡಿ ಪ್ರಕರಣ ದಾಖಲಿಸಿ, ಮೂವರನ್ನು ಬಂಧಿಸಿದ್ದಾರೆ. ವಿಖ್ಯಾತ ಆಚಾರ್ಯ ಮತ್ತು ಸುಚಿತ್ ನಾಯಕ್ ಎಂಬಿಬ್ಬರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಮೂರನೇ ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದು, ಆತನನ್ನು ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲಾಗಿದೆ.