ಜು.16 ರಂದು ಜಗನ್ನಾಥ ರಥೋತ್ಸವ
ಮಂಗಳೂರು: ನಗರದ ಕುಡುಪುಕಟ್ಟೆಯಲ್ಲಿರುವ ಇಸ್ಕಾನ್ ಶ್ರೀ ಜಗನ್ನಾಥ ಮಂದಿರದ ವತಿಯಿಂದ ಜು.16 ರಂದು ನಗರದಲ್ಲಿ ಜಗನ್ನಾಥ ರಥೋತ್ಸವ ನಡೆಯಲಿದೆ.
ಒಡಿಶಾ ಪುರಿ ಶ್ರೀ ಜಗನ್ನಾಥ ರಥಯಾತ್ರೆಯ ಮಾದರಿಯಲ್ಲಿಯೇ ಈ ರಥಯಾತ್ರೆ ನಡೆಯಲಿದೆ. ಅಂದು ಮಧ್ಯಾಹ್ನ 3.30ಕ್ಕೆ ನಾರಾಯಣಗುರು ವೃತ್ತ (ಲೇಡಿಹಿಲ್)ದಿಂದ ರಥಯಾತ್ರೆ ಆರಂಭಗೊಂಡು ಲಾಲ್‌ಭಾಗ್, ಪಿವಿಎಸ್ ವೃತ್ತ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ, ಕ್ಲಾಕ್ ಟವರ್ ಆಗಿ ಸಂಜೆ 5.30ಕ್ಕೆ ಪುರಭವನ ತಲುಪಲಿದೆ. ಪುರಭವನದಲ್ಲಿ ಪ್ರಸಾದ ವಿತರಣೆ, ಸಾಂಸ್ಕೃತಿಕ, ಯುವ ಸಬಲೀಕರಣ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕ ಭಕ್ತರಿಗೂ ರಥವನ್ನು ಎಳೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಇಸ್ಕಾನ್ ಕುಡುಪುಕಟ್ಟೆ ಮ್ಯಾನೇಜ್‌ಮೆಂಟ್ ಸಮಿತಿಯ ಸದಸ್ಯ ಪ್ರೇಮಭಕ್ತಿ ದಾಸ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಥಯಾತ್ರೆಯಲ್ಲಿ ದೇಶ-ವಿದೇಶಗಳ 2,000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉದ್ಘಾಟನಾ ಸಮಾರಂಭದಲ್ಲಿ ಇಸ್ಕಾನ್ ಹಿರಿಯ ಸಂತರು, ಮಂಗಳೂರಿನ ಗಣ್ಯರು ಭಾಗವಹಿಸಲಿದ್ದಾರೆ.
ಸಮಿತಿಯ ಸದಸ್ಯರಾದ ದೇವಧರ್ಮ ದಾಸ, ಉದ್ಭವ ಪ್ರಾಣಕೃಷ್ಣ ದಾಸ ಉಪಸ್ಥಿತರಿದ್ದರು.