ಕರಾವಳಿಯಾಧ್ಯಂತ ವ್ಯಾಪಕ ಮಳೆ: ಜುಲೈ 20ರಿಂದ ಜಿಟಿಜಿಟಿ ಮಳೆ ಕೊಂಚ ಬಿಡುವು ನೀಡುವ ಸಾಧ್ಯತೆ

ಕರಾವಳಿಯಾಧ್ಯಂತ ವ್ಯಾಪಕ ಮಳೆ: ಜುಲೈ 20ರಿಂದ ಜಿಟಿಜಿಟಿ ಮಳೆ ಕೊಂಚ ಬಿಡುವು ನೀಡುವ ಸಾಧ್ಯತೆ

ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಭಾನುವಾರ ಕರಾವಳಿಯಾಧ್ಯಂತ ಬಿಟ್ಟು ಬಿಟ್ಟು ಉತ್ತಮ ಮಳೆಯಾಗಿದೆ. ಬೆಳಗಿನ ಜಾವದಿಂದಲೇ ಆರಂಭವಾದ ಜಿಟಿಜಿಟಿ ಮಳೆ, ಸಂಜೆ ವೇಳೆಗೆ ಗ್ರಾಮೀಣ ಭಾಗಗಳಲ್ಲಿ ಬಿರುಸು ಪಡೆದುಕೊಂಡಿತು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳ, ಚಾರ್ಮಾಡಿ ಘಾಟಿ ಪ್ರದೇಶ, ಸುಳ್ಯ, ಕಡಬ, ಬೆಳ್ತಂಗಡಿ ಸೇರಿದಂತೆ ಘಟ್ಟದ ತಳಭಾಗದ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿರುವ ವರದಿಯಾಗಿದೆ. ನಿರಂತರ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಹರಿವು ಸ್ಥಿರವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಗಡಿ ಜಿಲ್ಲೆ ಕಾಸರಗೋಡು ಸೇರಿದಂತೆ ಕರಾವಳಿಯ ಇತರೆಡೆಗಳಲ್ಲೂ ದಿನವಿಡೀ ಸೂರ್ಯನ ದರ್ಶನವಿಲ್ಲದೆ ಕೇವಲ ಮೋಡ ಹಾಗೂ ಅಲ್ಲಲ್ಲಿ ಸಾಧಾರಣ ಮಳೆಯ ವಾತಾವರಣ ಕಂಡುಬಂದಿದೆ.

ಭಾನುವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 28.3 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಕಡಬದಲ್ಲಿ 52.9 ಮಿಮಿ ಮಳೆಯಾಗಿದೆ. ಬೆಳ್ತಂಗಡಿ 33.2 ಮಿ.ಮೀ, ಬಂಟ್ವಾಳ 17.8 ಮಿ.ಮೀ, ಪುತ್ತೂರು 18.1 ಮಿ.ಮೀ, ಮಂಗಳೂರಿನಲ್ಲಿ 7.5 ಮಿಮಿ ಮಳೆಯಾದರೆ, ಉಳ್ಳಾಲದಲ್ಲಿ 6.9 ಮಿಮಿ ಮಳೆಯಾಗಿದೆ. ಸುಳ್ಯದಲ್ಲಿ 33.9 ಮಿ.ಮೀ., ಮೂಡುಬಿದಿರೆ 11.6 ಮಿ.ಮೀ, ಮೂಲ್ಕಿ 13.2 ಮಿ.ಮೀ. ಮಳೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನೇತ್ರಾವತಿ ನದಿ (ಬಂಟ್ವಾಳ) 5.850 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 24.30 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 79.195 ಮೀ, ಗುರುಪುರ ನದಿ (ಅದ್ದೂರು) 2.9 ಮೀ ನೀರಿದೆ. ನದಿಗಳ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ತಗ್ಗು ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ನದಿ ತೀರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

 ಮುಂದಿನ ದಿನಗಳ ಮಳೆ ಮುನ್ಸೂಚನೆ

ಹವಾಮಾನದ ಪ್ರಸ್ತುತ ಮುನ್ಸೂಚನೆಗಳ ಪ್ರಕಾರ, ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಮುಂದಿನ ದಿನಗಳಲ್ಲಿ ಕೊಂಚ ತಗ್ಗುವ ಲಕ್ಷಣಗಳಿವೆ. ಜುಲೈ 20ರಿಂದ ದ.ಕ, ಉಡುಪಿ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ಮುನ್ಸೂಚನೆ ಇದೆ. ಸದ್ಯಕ್ಕೆ ಕರಾವಳಿಯಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ ಇಲ್ಲದಿದ್ದರೂ, ಘಟ್ಟ ಪ್ರದೇಶಗಳಲ್ಲಿ ಮತ್ತು ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ಸಾರ್ವಜನಿಕರು ಹಾಗೂ ಮೀನುಗಾರರು ಜಾಗರೂಕರಾಗಿರಲು ಸೂಚಿಸಲಾಗಿದೆ. ಜುಲೈ ಮೂರನೇ ವಾರದ ಅಂತ್ಯದ ವೇಳೆಗೆ ಹವಾಮಾನದಲ್ಲಿ ಮತ್ತಷ್ಟು ಏರುಪೇರಾಗುವ ಸಾಧ್ಯತೆಗಳಿದ್ದು, ನೈಋತ್ಯ ಮುಂಗಾರು ಜುಲೈ 20ರ ನಂತರ ಕೊಂಚ ನಿಧಾನಗತಿಯನ್ನು ಪಡೆದುಕೊಳ್ಳಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article